'ರಣಂ’ ಸಿನಿಮಾ ಶೂಟಿಂಗ್ ವೇಳೆ ಸಿಲಿಂಡರ್ ಸ್ಫೋಟ: ತಾಯಿ-ಮಗಳು ಮೃತ್ಯು

Update: 2019-03-29 14:52 GMT

ಬೆಂಗಳೂರು, ಮಾ.29: ನಗರದ ಬಾಗಲೂರು ಸಮೀಪದ ಕೈಗಾರಿಕಾ ಪ್ರದೇಶದಲ್ಲಿ ನಡೆಯುತ್ತಿದ್ದ ಕನ್ನಡ ಸಿನಿಮಾ ‘ರಣಂ’ ಚಿತ್ರೀಕರಣ ವೇಳೆ ಸಿಲಿಂಡರ್ ಸ್ಫೋಟವಾಗಿ ತಾಯಿ-ಮಗಳು ಮೃತಪಟ್ಟಿರುವ ದುರ್ಘಟನೆ ಇಲ್ಲಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ಕಟ್ಟಿಗೇನಹಳ್ಳಿ ನಿವಾಸಿಗಳಾದ ಸುಬೇನಾ(29) ಹಾಗೂ ಅವರ ಮಗಳು ಆಹೀರಾ(8) ಮೃತಪಟ್ಟವರು ಎಂದು ತಿಳಿದುಬಂದಿದೆ.

ಏನಾಯಿತು?: ನಟರಾದ ಚಿರಂಜೀವಿ ಸರ್ಜಾ ಹಾಗೂ ಚೇತನ್ ಅಭಿನಯದ ‘ರಣಂ’ ಸಿನಿಮಾದ ಕೊನೆಹಂತದ ಚಿತ್ರೀಕರಣಕ್ಕಾಗಿ ಇಲ್ಲಿನ ಬಾಗಲೂರಿನ ಕೈಗಾರಿಕಾ ಪ್ರದೇಶ ಸಮೀಪದ ಶೆಲ್ ಪೆಟ್ರೋಲ್ ಬಂಕ್ ಬಳಿ ಕಾರನ್ನು ಗಾಳಿಯಲ್ಲಿ ಹಾರಿಸುವ ದೃಶ್ಯ ಸೆರೆ ಹಿಡಿಯಲು ಚಿತ್ರ ತಂಡ ಮುಂದಾಗಿತ್ತು.

ಈ ವೇಳೆ ಸಿಲಿಂಡರ್ ಸ್ಫೋಟಿಸುವ ದೃಶ್ಯವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗುತ್ತಿತ್ತು. ಅದೇ ವೇಳೆ ಸ್ಫೋಟದ ತೀವ್ರತೆ ಹೆಚ್ಚಿದ್ದರಿಂದಾಗಿ ಸುಬೇನಾ ಮತ್ತು ಆಹೀರಾ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸಿನಿಮಾ ತಂಡದ ಐವರು ಸೇರಿ ಏಳು ಮಂದಿಗೆ ಗಾಯವಾಗಿದ್ದು, ಅವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಚಿತ್ರ ತಂಡದ ಪ್ರಮುಖರು ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಡಿಸಿಪಿ ಕಲಾಕೃಷ್ಣಸ್ವಾಮಿ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ನೋಡಲು ಬಂದಿದ್ದ ತಾಯಿ-ಮಗಳು

ಸುಬೇನಾ, ಈಕೆಯ ಪತಿ ಹಾಗೂ ಪುತ್ರಿ ಆಹೀರಾ ಕಾರಿನಲ್ಲಿ ಕಟ್ಟಿಗೇನಹಳ್ಳಿಯಿಂದ ಬಾಗಲೂರು ಮಾರ್ಗವಾಗಿ ಸೂಲಿಬೆಲೆಗೆ ತೆರಳುತ್ತಿದ್ದರು. ಬಾಗಲೂರಿನ ಕೈಗಾರಿಕಾ ಪ್ರದೇಶ ಸಮೀಪದ ಶೆಲ್ ಪೆಟ್ರೋಲ್ ಬಂಕ್ ಬಳಿ ಚಿತ್ರೀಕರಣ ನಡೆಯುತ್ತಿದ್ದ ಕಾರಣ, ಕಾರಿನಿಂದ ಇಳಿದು, ನೋಡಲು ಹೋಗಿದ್ದಾರೆ. ಈ ವೇಳೆ ದಿಢೀರ್ ಸಿಲಿಂಡರ್ ಸ್ಫೋಟಗೊಂಡು, ದುರ್ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.

ದೇಹ ಛಿದ್ರ..

ಸಿಲಿಂಡರ್ ಸ್ಫೋಟದ ತೀವ್ರತೆಯಿಂದಾಗಿ ಸುಬೇನಾ ಹಾಗೂ ಅವರ ಮಗಳು ಆಹೀರಾ ಅವರ ದೇಹ ಛಿದ್ರಗೊಂಡು, ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಝೈನಬ್‌ಗೆ ಚಿಕಿತ್ಸೆ

ಘಟನೆಯಲ್ಲಿ ಝೈನಬ್ ಎಂಬ ಮಗು ತೀವ್ರ ಗಾಯಗೊಂಡಿದ್ದು, ನಗರ ಖಾಸಗಿ ಆಸ್ಪತ್ರೆಯೊಂದರಲ್ಲಿ ತುರ್ತು ಚಿಕಿತ್ಸಾ ಘಟಕದಲ್ಲಿ ಇರಿಸಲಾಗಿದೆ.

‘ಕಾನೂನು ಕ್ರಮ’

‘ರಣಂ’ ಚಿತ್ರ ತಂಡದ ಪ್ರಮುಖರು ಚಿತ್ರೀಕರಣ ಹಾಗೂ ಕೆಲ ವಸ್ತುಗಳನ್ನು ಬಳಕೆ ಮಾಡುವ ಸಂಬಂಧ ಯಾವುದೇ ರೀತಿಯ ಅನುಮತಿ ಪಡೆದಿಲ್ಲ. ಜೊತೆಗೆ, ಮುಂಜಾಗೃತೆ ಕ್ರಮ ಕೈಗೊಂಡಿಲ್ಲ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

-ಕಲಾಕೃಷ್ಣಸ್ವಾಮಿ, ಡಿಸಿಪಿ, ಈಶಾನ್ಯ ವಿಭಾಗ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News