ಬಿಜೆಪಿ ರೂಪಿಸಿರುವ ತಂತ್ರ ಎದುರಿಸಲು ಸಿದ್ಧ: ಎಚ್.ಡಿ.ಕುಮಾರಸ್ವಾಮಿ

Update: 2019-03-29 17:04 GMT

ಬೆಂಗಳೂರು, ಮಾ.29: ಬಿಜೆಪಿಯವರು ನಮ್ಮ ವಿರುದ್ಧ ಯಾವ ಯಾವ ತಂತ್ರಗಳನ್ನು ರೂಪಿಸಿದ್ದಾರೋ ನೋಡೋಣ. ನಾವು ಎಲ್ಲದಕ್ಕೂ ಸಿದ್ಧವಾಗಿದ್ದೇವೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿನ್ನೆ ನಡೆದ ಐಟಿ ದಾಳಿಯಲ್ಲಿ ಎಲ್ಲಾದರೂ 10 ರೂ. ಆದರೂ ಸಿಕ್ಕಿದೆಯೇ? ಯಾವ ಉದ್ದೇಶದಿಂದ ಅಧಿಕಾರಿಗಳು ಐಟಿ ದಾಳಿ ನಡೆಸಿದ್ದಾರೆ? ಎಂದು ಪ್ರಶ್ನಿಸಿದರು.

ಬಿಜೆಪಿಯವರೆಲ್ಲ ಬಹಳ ಬಡವರು. ದುಡ್ಡಿಲ್ಲದೆ ಕೈ ಮುಗಿದು ಜನರ ಬಳಿ ಮತ ಕೇಳುತ್ತಿದ್ದಾರೆ. ಯಡಿಯೂರಪ್ಪ, ಆರ್.ಅಶೋಕ್ ಏನು ಮಾಡಿದ್ದರು ಎಂಬುದು ನನಗೆ ಗೊತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಸೋಲಿಸಲು ಬಿಜೆಪಿಯವರು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಆದಾಯ ತೆರಿಗೆ ಇಲಾಖೆಯ ಕಚೇರಿ ಎದುರು ಮುಖ್ಯಮಂತ್ರಿ ಪ್ರತಿಭಟನೆ ಮಾಡಿದ್ದನ್ನು ಟೀಕಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ಮುಖ್ಯಮಂತ್ರಿ, ನಾನು ಯಾವ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೂ ಬುಡಮೇಲು ಮಾಡಿಲ್ಲ ಎಂದರು.

ಈ ವಿಚಾರದ ಕುರಿತು ಮಾತನಾಡಲು ಯಡಿಯೂರಪ್ಪಗೆ ಯಾವ ನೈತಿಕತೆಯೂ ಇಲ್ಲ. ನನ್ನ ವಿರುದ್ಧ ಯಡಿಯೂರಪ್ಪ ಹಾಕಿಸಿದ ಪ್ರಕರಣಗಳ ವಿರುದ್ಧ 12 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇನೆ. ಯಡಿಯೂರಪ್ಪ ತಮ್ಮ ವಿರುದ್ಧದ ಪ್ರಕರಣಗಳನ್ನು ಹೇಗೆ ವಿಲೇವಾರಿ ಮಾಡಿಸಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿದೆ ಎಂದು ಮುಖ್ಯಮಂತ್ರಿ ಆಕ್ರೋಶ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡಿಕೊಂಡು ಪ್ರಕರಣ ವಿಲೇವಾರಿ ಮಾಡಿಸಿಕೊಂಡರು. ನಾನು ಯಾವುದೇ ಸಂವಿಧಾನ ಸಂಸ್ಥೆಗಳನ್ನು ದುಡ್ಡು ಕೊಟ್ಟು ಖರೀದಿ ಮಾಡಿಲ್ಲ. ಎಲ್ಲವನ್ನೂ ನ್ಯಾಯಯುತವಾಗಿ ಎದುರಿಸುತ್ತಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News