ಅಂತರ್‌ರಾಷ್ಟ್ರೀಯ ಫುಟ್ಬಾಲ್‌ನಿಂದ ಹಿಗ್ಯುನ್ ನಿವೃತ್ತಿ

Update: 2019-03-29 18:57 GMT

ಬುನಸ್‌ಐರಿಸ್, ಮಾ.29: ಅರ್ಜೆಂಟೀನದ ಸ್ಟ್ರೈಕರ್ ಗೊಂಝಾಲೊ ಹಿಗ್ಯುನ್ ಗುರುವಾರ ಅಂತರ್‌ರಾಷ್ಟ್ರೀಯ ಪುಟ್ಬಾಲ್‌ನಿಂದ ನಿವೃತ್ತಿ ಘೋಷಿಸಿದ್ದಾರೆ. ‘‘ನನ್ನ ತಂಡದ ಯಶಸ್ಸಿಗೆ ಸರ್ವರೀತಿಯಲ್ಲೂ ಪ್ರಯತ್ನಿಸಿದ್ದೇನೆ. ತನ್ನ ಕುಟುಂಬ ಸದಸ್ಯರೊಂದಿಗೆ ಹೆಚ್ಚಿ ನ ಸಮಯ ಕಳೆಯಲು ಬಯಸಿದ್ದು, ಪ್ರೀಮಿಯರ್ ಲೀಗ್ ಕ್ಲಬ್ ಚೆಲ್ಸಿಯ ಪರ ಹೆಚ್ಚು ಗಮನ ನೀಡುವೆನು’’ ಎಂದು 31ರ ಹರೆಯದ ಹಿಗ್ಯುನ್ ಹೇಳಿದ್ದಾರೆ.

ಫ್ರಾನ್ಸ್ ಮೂಲದ ಹಿಗ್ಯುನ್ 2010ರ ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಅರ್ಜೆಂಟೀನದ ಪರ ಚೊಚ್ಚಲ ಪಂದ್ಯ ಆಡಿದ್ದರು. ದ.ಆಫ್ರಿಕದಲ್ಲಿ ನಡೆದ ವಿಶ್ವಕಪ್‌ನಲ್ಲಿ ಒಟ್ಟು 4 ಗೋಲು ದಾಖಲಿಸಿ ಗಮನ ಸೆಳೆದಿದ್ದರು. ಅರ್ಜೆಂಟೀನದ ಪರ 75 ಪಂದ್ಯಗಳನ್ನು ಆಡಿರುವ ಹಿಗ್ಯುನ್ ಒಟ್ಟು 35 ಗೋಲುಗಳನ್ನು ದಾಖಲಿಸಿದ್ದಾರೆ. 2018ರ ವಿಶ್ವಕಪ್‌ನಲ್ಲಿ ನೈಜೀರಿಯ ವಿರುದ್ಧದ ಪಂದ್ಯದಲ್ಲಿ ತನ್ನ ತಂಡದ ಪರ ಕೊನೆಯ ಪಂದ್ಯ ಆಡಿದ್ದರು. ಆ ಪಂದ್ಯದಲ್ಲಿ ಅರ್ಜೆಂಟೀನ 2-1 ಅಂತರದಿಂದ ಜಯ ಸಾಧಿಸಿತ್ತು. ಆದರೆ, ಇತ್ತೀಚೆಗೆ ಅರ್ಜೆಂಟೀನ ತಂಡದ ಕಳಪೆ ಪ್ರದರ್ಶನಕ್ಕೆ ಹಿಗ್ಯುನ್‌ರನ್ನು ಬಲಿಪಶು ಮಾಡಲಾಗುತ್ತಿದೆ ಎಂಬ ಮಾತು ಕೇಳಿಬಂದಿತ್ತು. 2014ರಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಅರ್ಜೆಂಟೀನ ತಂಡ ಫೈನಲ್‌ಗೆ ತಲುಪಿದ್ದರೂ ಜರ್ಮನಿ ವಿರುದ್ಧ ಕೇವಲ ಒಂದು ಗೋಲು ಅಂತರದಿಂದ ಸೋತಿತ್ತು. ವಿಶ್ವಕಪ್ ಫೈನಲ್‌ನಲ್ಲಿ ಗೋಲು ಬಾರಿಸಲು ವಿಫಲವಾಗಿದ್ದ ಹಿಗ್ಯುನ್ ಆ ಬಳಿಕ 2015 ಹಾಗೂ 2016ರಲ್ಲಿ ಕೊಪಾ ಅಮೆರಿಕ ಟೂರ್ನಿಯ ಫೈನಲ್‌ನಲ್ಲೂ ವಿಫಲರಾಗಿದ್ದರು. ಅರ್ಜೆಂಟೀನ ಮೂರು ಬಾರಿ ಪ್ರಶಸ್ತಿ ಹೊಸ್ತಿಲಲ್ಲಿ ಎಡವಿದ್ದರೂ ತನ್ನ ತಂಡದ ಕುರಿತು ಹಿಗ್ಯುನ್‌ಹೆಮ್ಮೆ ವ್ಯಕ್ತಪಡಿಸಿದ್ದಾರೆ. ‘‘ಮೂರು ಫೈನಲ್ ಪಂದ್ಯಗಳಲ್ಲಿ ಆಡಿ ಸೋತಿರುವುದು ತಂಡದ ವೈಫಲ್ಯವಲ್ಲ. ಜನರು ನಿಮ್ಮ ತಪ್ಪುಗಳನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ಆದರೆ, ಸಾಧನೆಯನ್ನು ಮರೆಯುತ್ತಾರೆ. ಈಗ ಟೀಕೆ ಮಾಡುತ್ತಿರುವವರು ನಾನು 2014ರ ವಿಶ್ವಕಪ್ ಸೆಮಿ ಫೈನಲ್‌ನಲ್ಲಿ ಬೆಲ್ಜಿಯಂ ವಿರುದ್ಧ ಗೋಲು ದಾಖಲಿಸಿದ ಸಂದರ್ಭದಲ್ಲಿ ಖಂಡಿತವಾಗಿಯೂ ಸಂತಸಪಟ್ಟಿರುತ್ತಾರೆ. ಟೀಕೆಗಳು ಅಸಹ್ಯವಾದಾಗ ಸಹಜವಾಗಿಯೇ ಎಲ್ಲರಿಗೂ ನೋವಾಗುತ್ತದೆ. ನಾನು ತಂಡಕ್ಕೆ ಸರ್ವಸ್ವವನ್ನೂ ನೀಡಿದ್ದೇನೆ. ನನ್ನ ಕುಟುಂಬ ನನ್ನಿಂದ ಹೆಚ್ಚು ತೊಂದರೆ ಅನುಭವಿಸಿದೆ’’ ಎಂದು ಹಿಗ್ಯುನ್ ಹೇಳಿದ್ದಾರೆ.

ಹಿಗ್ಯುನ್‌ಗೆ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಕೈತಪ್ಪಿದ್ದರೂ ಕ್ಲಬ್ ಮಟ್ಟದಲ್ಲಿ ಹಲವು ಪ್ರಮುಖ ಪ್ರಶಸ್ತಿ ಗಳನ್ನು ಜಯಿಸಿದ್ದರು. 2007 ಹಾಗೂ 2008ರಲ್ಲಿ ರಿಯಲ್ ಮ್ಯಾಡ್ರಿಡ್ ಪರ ಸ್ಪಾನಿಶ್ ಲೀಗ್ ಪ್ರಶಸ್ತಿ ಗೆದ್ದುಕೊಂಡಿದ್ದರು. 2017 ಹಾಗೂ 2018ರಲ್ಲಿ ಜುವೆಂಟಸ್ ತಂಡಕ್ಕೆ ಇಟಾಲಿಯನ್ ಚಾಂಪಿಯನ್ಸ್ ಕಿರೀಟ ತೊಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News