ವಂಶಪಾರಂಪರ್ಯ ಆಡಳಿತಕ್ಕೆ ನನ್ನ ವಿರೋಧ: ಎಸ್.ಎಂ.ಕೃಷ್ಣ

Update: 2019-03-31 11:56 GMT

ಬೆಂಗಳೂರು, ಮಾ.31:ನಾನು ಮೊದಲಿನಿಂದಲೂ ವಂಶಪಾರಂಪರ್ಯ ಅಧಿಕಾರವನ್ನು ವಿರೋಧಿಸಿಕೊಂಡು ಬಂದವನು. ಆಡಳಿತ ನಡೆಸುವುದಕ್ಕೆ ಅರ್ಹತೆ ಇಲ್ಲದಿದ್ದರೂ, ನಾನು ಆ ವಂಶದಲ್ಲಿ ಹುಟ್ಟಿದೆ. ಹೀಗಾಗಿ ನಾನು ದೇಶ ಆಳುತ್ತೇನೆ ಅನ್ನೋದು ಒಪ್ಪಲು ಸಾಧ್ಯವಾಗದ ಮಾತು ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಪರೋಕ್ಷವಾಗಿ ನೆಹರೂ-ಗಾಂಧಿ ಕುಟುಂಬವನ್ನು ಟೀಕಿಸಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಪರವಾಗಿ ಚುನಾವಣಾ ಪ್ರಚಾರಕ್ಕಿಳಿದ ಎಸ್.ಎಂ.ಕೃಷ್ಣ, ರಾಜಾಜಿನಗರದ ಬ್ರಿಗೇಡ್ ಗೇಟ್ ವೇ ಅಪಾರ್ಟ್‌ಮೆಂಟ್ ನಿವಾಸಿಗಳೊಂದಿಗೆ ಆಯೋಜಿಸಲಾಗಿದ್ದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇದು ಮಹತ್ವದ ಚುನಾವಣೆ. ಕಳೆದ 5 ವರ್ಷಗಳಲ್ಲಿ ನಮ್ಮ ದೇಶ ನಡೆದು ಬಂದಿರುವ ದಾರಿಯನ್ನು ಹಿಂದಿರುಗಿ ನೋಡಿದಾಗ ಸಮಾಧಾನ, ಸಂತೋಷವಾಗುತ್ತದೆ. ಈ ರಾಷ್ಟ್ರಕ್ಕೆ ಒಬ್ಬ ಬಲಿಷ್ಠ ವ್ಯಕ್ತಿ ಪ್ರಧಾನಿ ಆಗಬೇಕು ಎಂದಾಗ ಗುಜರಾತ್ ನಿಂದ ನರೇಂದ್ರ ಮೋದಿ ಬಂದರು. ಅಲ್ಲಿಯವರೆಗೂ ಬಲಿಷ್ಠ ಪ್ರಧಾನಿ ಅಂದರೆ ಏನು ಅನ್ನೋದು ಈ ದೇಶಕ್ಕೆ ತಿಳಿದಿರಲಿಲ್ಲ ಎಂದು ಅವರು ಹೇಳಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಟೀಕಾ ಪ್ರಹಾರ ಮಾಡಿದ ಎಸ್.ಎಂ.ಕೃಷ್ಣ. ಅವರು ಬೇಲ್ ಮೇಲೆ ಇರುವವರು, ಅವರು ತಪ್ಪು ಮಾಡಲಿಲ್ಲ ಅಂದರೆ ಯಾಕೆ ಬೇಲ್ ಮೇಲೆ ಇರಬೇಕು. ತಪ್ಪು ಮಾಡಿದ್ರೆ ಜೈಲಿಗೆ ಹೋಗೋಣ, ತಪ್ಪುಮಾಡಿಲ್ಲ ಅಂದ್ರೆ ಜನತೆ ಮಧ್ಯೆ ತಲೆ ಎತ್ತಿ ಓಡಾಡೋಣ ಎಂದರು.
ಮೋದಿ 5 ವರ್ಷಗಳ ಆಡಳಿತದಲ್ಲಿ ಒಂದು ಹಗರಣ ಇಲ್ಲ. ಆರ್ಥಿಕ ವ್ಯವಸ್ಥೆಯಲ್ಲಿ ದೇಶ ಇವತ್ತು ಚೀನಾಗೆ ಪೈಪೊಟಿ ನೀಡುತ್ತಿದೆ ಎಂದ ಅವರು, ರಫೇಲ್ ಒಪ್ಪಂದ ಕುರಿತು ಪ್ರಸ್ತಾಪಿಸಿ, ಕಾಂಗ್ರೆಸ್ ನಾಯಕರು ಸಾಕಷ್ಟು ಆರೋಪಗಳನ್ನ ಮಾಡಿದರು. ಆದರೆ, ಅವರ ಆರೋಪದಲ್ಲಿ ಸತ್ವ, ಸತ್ಯ ಎರಡು ಇಲ್ಲ ಎಂದರು.

ನಾನು ವಿದೇಶಾಂಗ ಸಚಿವನಾಗಿದ್ದಾಗ ನಮ್ಮ ಹಾಗೂ ಪಾಕಿಸ್ತಾನದ ಜೊತೆ ಸಂಬಂಧ ಸುಧಾರಣೆ ಮಾಡುವುದಕ್ಕಾಗಿ ಕೆಲ ಮಾತುಕತೆ ನಡೆಸಿದ್ದೆ. ಆದರೆ, ಅವರು ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ. ಹಿಂದಿನ ಸರಕಾರಗಳಂತೆ ಪಾಕಿಸ್ತಾನಕ್ಕೆ ಉತ್ತರ ಕೊಡದೇ, ಈ ಸರಕಾರ ಕೈ ಕಟ್ಟಿ ಕೂರಲಿಲ್ಲ. ಮೋದಿ ನೇತೃತ್ವದ ಸರಕಾರ ಐದು ವರ್ಷ ಅಲ್ಲ, 10 ವರ್ಷ ದೇಶವನ್ನು ಮುನ್ನಡೆಸಬೇಕು ಎಂದು ಎಸ್.ಎಂ.ಕೃಷ್ಣ ತಿಳಿಸಿದರು.

2004 ರಲ್ಲಿ ಜನ ನನಗೆ ಆಶೀರ್ವಾದ ಮಾಡಲಿಲ್ಲ. ಮತ್ತೆ ಮುಖ್ಯಮಂತ್ರಿಯಾಗಿ ಮುಂದುವರೆಸಲು ನನ್ನನ್ನು ಇಲ್ಲೆ ಉಳಿಸಿಕೊಳ್ಳಬಹುದಿತ್ತು. ಆದರೆ, ಕಾಣದ ಕೈಗಳು ನನ್ನನ್ನು ಮಹಾರಾಷ್ಟ್ರ ರಾಜ್ಯಪಾಲರನ್ನಾಗಿ ಕಳುಹಿಸಿದರು. ನಂತರ ನನಗೆ ಕೇಂದ್ರಕ್ಕೆ ಕಳುಹಿಸಿದರು. ಇಂದು ಬಂದು ನಾಳೆ ಉದುರಿ ಹೋಗುವ ಸರಕಾರ ಬೇಕೋ, ಅಥವಾ ಐದು ವರ್ಷ ಸುಭಧ್ರ ಸರಕಾರ ಬೇಕೋ ಜನ ತೀರ್ಮಾನ ಮಾಡಬೇಕು ಎಂದು ಅವರು ಕರೆ ನೀಡಿದರು.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ.ಸದಾನಂದ ಗೌಡ ಮಾತನಾಡಿ, ನಾನು ಹಾಗೂ ಅನಂತಕುಮಾರ್ ಜೊತೆಯಾಗಿ ರಾಜ್ಯದ ಅಭಿವೃದ್ಧಿಗೆ ಕೆಲಸ ಮಾಡಿದ್ದೇವೆ. ಇವತ್ತು ಅನಂತಕುಮಾರ್ ಇಲ್ಲ. ಹಾಗಂತ, ನಾವು ಜೋಡೆತ್ತುಗಳು ಎಂದು ಹೇಳುವುದಿಲ್ಲ ಎಂದರು.
ಹಿಂದಿನ ಚುನಾವಣೆಗಳು ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳ ಮೇಲೆ ನಡೆಯುತ್ತಿದ್ದವು. ಆದರೆ, ಈಗ ಮೋದಿ ಕೊಟ್ಟಿರುವ ಭರವಸೆಗಳನ್ನು ಈಡೇರಿಸಿದ್ದು, ಅವರ ಆಡಳಿತದ ಮೇಲೆ ಮತ ಯಾಚಿಸಲಾಗುತ್ತಿದೆ. ಪುಲ್ವಾಮ ದಾಳಿ ಬಳಿಕ ಪಾಕಿಸ್ತಾನಕ್ಕೆ ಒಂದೇ ಒಂದು ರಾಷ್ಟ್ರ ಬೆಂಬಲ. ಇದು ಮೋದಿಯ ನಾಯಕತ್ವ ಎಂದರು.

ಕಾರ್ಯಕ್ರಮದಲ್ಲಿ ಮಲ್ಲೇಶ್ವರಂ ಶಾಸಕ ಡಾ.ಸಿ.ಎನ್.ಅಶ್ವಥ್‌ನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News