×
Ad

10 ಕೋಟಿ ಬದಲು 20 ಲಕ್ಷ ಉದ್ಯೋಗ ಸೃಷ್ಟಿ: ಕೇಂದ್ರ ಸರಕಾರದ ವಿರುದ್ಧ ಕೃಷ್ಣಭೈರೇಗೌಡ ವಾಗ್ದಾಳಿ

Update: 2019-03-31 17:31 IST

ಬೆಂಗಳೂರು, ಮಾ.31: ಪ್ರಧಾನಿ ನರೇಂದ್ರ ಮೋದಿ ಕಳೆದ ಚುನಾವಣೆ ವೇಳೆ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಿದ್ದರು. ಅದರಂತೆ, ಐದು ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿತ್ತು. ಆದರೆ, ಅವರು ಮಾಡಿದ್ದು ಕೇವಲ ಇಪ್ಪತ್ತು ಲಕ್ಷ ಉದ್ಯೋಗ ಮಾತ್ರ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ವಾಗ್ದಾಳಿ ನಡೆಸಿದರು.

ನಗರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಮಂಜುನಾಥ್ ಕಚೇರಿ ಸಮೀಪದ ಸಭಾಂಗಣದಲ್ಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಮುಖಂಡರು ಆಯೋಜಿಸಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಪಕೋಡ ಮಾರಾಟ ಮಾಡಿ ಎನ್ನುತ್ತಿದ್ದಾರೆ. ಆದರೆ ಗ್ಯಾಸ್ ಸಿಲಿಂಡರ್ ಬೆಲೆ ನಾಲ್ಕು ನೂರು ರೂಪಾಯಿಂದ ಒಂದು ಸಾವಿರ ರೂ.ಗಳಿಗೆ ಏರಿಸಿ ಪಕೋಡ ಮಾರುವ ವ್ಯಾಪಾರಿಗಳ ಆದಾಯಕ್ಕೂ ಕತ್ತರಿ ಹಾಕಿದ್ದಾರೆ. ಚೌಕಿದಾರ್ ಎಂದು ಹೇಳುವ ಮೋದಿ, ನಿಜಕ್ಕೂ ಕಾವಲುಗಾರರಾಗಿದ್ದರೆ ಪುಲ್ವಾಮಾದಲ್ಲಿ ಪ್ರಾಣತ್ಯಾಗ ಮಾಡಿದ ಸೈನಿಕರ ಜೀವವನ್ನು ಕಾಪಾಡಬೇಕಿತ್ತು ಎಂದು ಅವರು ಹೇಳಿದರು.

ಆದಾಯ ತೆರಿಗೆ ಇಲಾಖೆ ದುರ್ಬಳಕೆ ಮಾಡಿಕೊಂಡು ಮಂಡ್ಯದ ಜೆಡಿಎಸ್ ನಾಯಕರ ಮನೆಯಲ್ಲಿರುವ 35 ಸಾವಿರ ರೂ.ವಶಪಡಿಸಿಕೊಂಡು ತಾವೆಂತಾ ಚೌಕಿದಾರ್ ಎಂಬುದನ್ನು ನಿರೂಪಿಸಿದ್ದಾರೆ. ವಿಜ್ಞಾನಿಗಳು ಶೋಧಿಸಿದ ಕ್ಷಿಪಣಿಯನ್ನು ಮೋದಿ ತನ್ನ ಸರಕಾರದ ಸಾಧನೆ ಎನ್ನುತ್ತಾರೆ. ನೋಟ್ ಬ್ಯಾನ್ ಮೂಲಕ ಸಣ್ಣ ಉದ್ದಿಮೆಗಳನ್ನೆ ಮುಳುಗಿಸಿಬಿಟ್ಟರು ಎಂದು ಕೃಷ್ಣ ಭೈರೇಗೌಡ ವಾಗ್ದಾಳಿ ನಡೆಸಿದರು.

ಈ ಹಿಂದೆ ಪಾಕಿಸ್ತಾನದ ವಿರುದ್ಧ ಯುದ್ಧ ನಡೆದಾಗ ಪಾಕ್ ಯೋಧರು ಸೋಲನ್ನು ಅನುಭವಿಸಿದ್ದರು. ಅವರ 92 ಸಾವಿರ ಸೈನಿಕರು ಇಂದಿರಾಗಾಂಧಿ ಸರಕಾರವಿದ್ದಾಗ ನಮ್ಮ ದೇಶದ ಸೇನೆ ಎದುರು ತಲೆ ಭಾಗಿದ್ದರು. ಆದರೆ ಕಾಂಗ್ರೆಸ್ ಸರಕಾರ ಆ ಘಟನೆಯನ್ನು ಪಕ್ಷದ ಪ್ರಚಾರಕ್ಕೆ ಬಳಸಿಕೊಳ್ಳಲಿಲ್ಲ. ಆದರೆ, ಮೋದಿ ಸರಕಾರ ಮರ್ಯಾದೆ ಬಿಟ್ಟು ಸೈನಿಕರ ತ್ಯಾಗವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಅವರು ಟೀಕಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಈ ಕ್ಷೇತ್ರದಿಂದ ಸ್ಪರ್ಧಿಸುವ ನಿರೀಕ್ಷೆ ಇತ್ತು. ಆದರೆ, ಮೈತ್ರಿ ನಾಯಕರೆಲ್ಲರೂ ಒತ್ತಾಯಿಸಿದ್ದರಿಂದ ಅಂತಿಮವಾಗಿ ನಾನು ಇಲ್ಲಿನ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ನಿಮ್ಮ ಆಶೀರ್ವಾದ ಮತದ ರೂಪದಲ್ಲಿ ಕೊಡಿ ಎಂದು ಕೃಷ್ಣ ಭೈರೇಗೌಡ ಮನವಿ ಮಾಡಿದರು.

ದಾಸರಹಳ್ಳಿ ಶಾಸಕ ಮಂಜುನಾಥ್ ಮಾತನಾಡಿ, ರಾಜ್ಯದಲ್ಲಿ ಯಾವುದೇ ಬಿಜೆಪಿ ನಾಯಕರಿಗೂ ತಮ್ಮ ಕಾರ್ಯದಕ್ಷತೆ ಆಧಾರದಲ್ಲಿ ಮತ ಕೇಳುವ ಅರ್ಹತೆ ಇಲ್ಲ. ಬದಲಿಗೆ ಬರೀ ಮೋದಿ ಹೆಸರು ಹೇಳಿಕೊಂಡು ಮತ ಕೇಳುತ್ತಿದ್ದಾರೆ. ಡಿ.ವಿ ಸದಾನಂದಗೌಡ ನಮ್ಮ ಜನರಿಗೆ ಕೇಂದ್ರ ಸಚಿವರು ಎಂದು ಗೊತ್ತಿದೆಯೇ ವಿನಃ ನಮ್ಮ ಭಾಗದ ಸಂಸದ ಎಂಬುದೇ ಗೊತ್ತಿಲ್ಲ. ಅವರಿಗೆ ಈ ಬಾರಿ ಯಾವುದೇ ಕಾರಣಕ್ಕೂ ಮತ ನೀಡಬಾರದು ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಡಾ.ಬಿ.ಎಲ್.ಶಂಕರ್, ಮಾಜಿ ಸಂಸದ ಸಿ.ನಾರಾಯಣಸ್ವಾಮಿ ಸೇರಿದಂತೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಹಲವು ಜೆಡಿಎಸ್, ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News