ಕಾಂಗ್ರೆಸ್ ಜೊತೆ ಲಿಂಕ್ ಆಗಿರುವ 687 ಪೇಜ್ ಗಳನ್ನು ತೆಗೆದುಹಾಕಿದ ಫೇಸ್ ಬುಕ್

Update: 2019-04-01 15:15 GMT

ಹೊಸದಿಲ್ಲಿ, ಎ.1: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಕಲಿ ಸುದ್ದಿಗಳ ವಿರುದ್ಧದ ಕ್ರಮಗಳ ಭಾಗವಾಗಿ ಕಾಂಗ್ರೆಸ್ ಪಕ್ಷದ ಐಟಿ ಸೆಲ್ ಜೊತೆ ಲಿಂಕ್ ಆಗಿರುವ 687 ಪೇಜ್ ಗಳನ್ನು ಮತ್ತು ಖಾತೆಗಳನ್ನು ತೆಗೆದು ಹಾಕಲಾಗಿದೆ ಎಂದು ಫೇಸ್ ಬುಕ್ ತಿಳಿಸಿದೆ.

ಈ ಖಾತೆಗಳು ಒಂದೇ ನೆಟ್ ವರ್ಕ್ ನಡಿ ಕಾರ್ಯಾಚರಿಸುತ್ತಿದ್ದು, ಅದರ ಕಂಟೆಂಟ್ ಅಥವಾ ನಕಲಿ ಸುದ್ದಿಗಳಿಗಾಗಿ ತೆಗೆದುಹಾಕಿಲ್ಲ. ಬದಲಾಗಿ, ‘ಅನೈತಿಕ ವರ್ತನೆ’ಗಾಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಫೇಸ್ ಬುಕ್ ಹೇಳಿದೆ.

ಈ ಬಗ್ಗೆ ಇನ್ನೂ ಕಾಂಗ್ರೆಸ್ ಯಾವುದೇ ಹೇಳಿಕೆ ನೀಡಿಲ್ಲ.

ಈ ಖಾತೆಗಳು ಸಂಘಟಿತ ಜಾಲವೊಂದರ ಭಾಗವಾಗಿದ್ದವು ಮತ್ತು ಇವುಗಳನ್ನು ಕಿತ್ತು ಹಾಕಲು ವಿಷಯ ಅಥವಾ ಸುಳ್ಳುಸುದ್ದಿಗಳು ಕಾರಣವಲ್ಲ. ಅಪ್ರಾಮಾಣಿಕ ನಡವಳಿಕೆ ಮತ್ತು ಸ್ಪಾಮ್‌ಗಳನ್ನು ಹರಡುತ್ತಿರುವುದಕ್ಕಾಗಿ ಇವುಗಳನ್ನು ಕಿತ್ತುಹಾಕಲಾಗಿದೆ ಎಂದು ಫೇಸ್‌ಬುಕ್ ತಿಳಿಸಿದೆ.

ಫೇಸ್‌ಬುಕ್‌ನ ಈ ಕ್ರಮಕ್ಕೆ ಕಾಂಗ್ರೆಸ್‌ನ ತಕ್ಷಣದ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಫೇಸ್‌ಬುಕ್ ನ ಸೈಬರ್ ಭದ್ರತೆ ನೀತಿಯ ಮುಖ್ಯಸ್ಥ ನಥಾನಿಯೆಲ್ ಗ್ಲೈಷರ್ ಅವರು, ಈಗ ಕಿತ್ತುಹಾಕಲಾಗಿರುವ 687 ಫೇಸ್‌ಬುಕ್ ಪುಟಗಳು ಮತ್ತು ಖಾತೆಗಳ ಪೈಕಿ ಹೆಚ್ಚಿನವುಗಳನ್ನು ಆಟೋಮೇಟೆಡ್ ಸಿಸ್ಟಮ್‌ಗಳು ಈಗಾಗಲೇ ಗುರುತಿಸಿ ಅಮಾನತುಗೊಳಿಸಿದ್ದವು. ಇವುಗಳು ಸಂಘಟಿತ ಅಪ್ರಾಮಾಣಿಕ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದವು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಐಟಿ ಸೆಲ್‌ನೊಂದಿಗೆ ಗುರುತಿಸಿಕೊಂಡ ವ್ಯಕ್ತಿಗಳಿಗೆ ಸಂಬಂಧಿಸಿದ್ದವು. ಇವು ತಮ್ಮ ಗುರುತುಗಳನ್ನು ಬಚ್ಚಿಡಲು ನಕಲಿ ಖಾತೆಗಳ ಜಾಲವನ್ನು ಬಳಸುತ್ತಿದ್ದವು ಎನ್ನುವುದು ಇವುಗಳನ್ನು ಕಿತ್ತುಹಾಕಲು ಕಾರಣವಾಗಿದೆ. ಈ ಪುಟಗಳು ಮತ್ತು ಗುಂಪುಗಳು ಶೇರ್ ಮಾಡಿಕೊಂಡ ಕಂಟೆಂಟ್‌ಗಳು ಇದಕ್ಕೆ ಕಾರಣವಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News