2030ರಲ್ಲಿ 67 ಕೋಟಿ ಭಾರತೀಯರಿಂದ ಅತ್ಯಂತ ಕಲುಷಿತ ಗಾಳಿ ಉಸಿರಾಟ

Update: 2019-04-01 18:02 GMT

 ಲಂಡನ್, ಎ. 1: ಭಾರತವು ತನ್ನ ಈಗಿನ ಮಾಲಿನ್ಯ ನಿಯಂತ್ರಣ ನೀತಿಗಳು ಮತ್ತು ನಿಯಮಾವಳಿಗಳನ್ನು ಸರಿಯಾಗಿ ಅನುಸರಿಸಿದರೂ, 2030ರಲ್ಲಿ 67.4 ಕೋಟಿಗೂ ಅಧಿಕ ಭಾರತೀಯರು ಅತ್ಯಂತ ಕಲುಷಿತ ಗಾಳಿಯನ್ನು ಉಸಿರಾಡುತ್ತಾರೆ ಎಂದು ಅಧ್ಯಯನವೊಂದು ತಿಳಿಸಿದೆ.

ಆಸ್ಟ್ರಿಯದ ‘ಇಂಟರ್‌ನ್ಯಾಶನಲ್ ಇನ್‌ಸ್ಟಿಟ್ಯೂಟ್ ಫಾರ್ ಅಪ್ಲೈಡ್ ಸಿಸ್ಟಮ್ಸ್ ಅನಾಲಿಸಿಸ್ (ಐಐಎಎಸ್‌ಎ)’ ಮತ್ತು ಹೊಸದಿಲ್ಲಿಯ ‘ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್‌ಮೆಂಟ್ ಆ್ಯಂಡ್ ವಾಟರ್ (ಸಿಇಇಡಬ್ಲು)’ ಬಿಡುಗಡೆ ಮಾಡಿರುವ ಅಧ್ಯಯನವು ಈ ಎಚ್ಚರಿಕೆಯನ್ನು ನೀಡಿದೆ.

2030ರಲ್ಲಿ ‘ರಾಷ್ಟ್ರೀಯ ಪರಿಸರ ವಾಯು ಗುಣಮಟ್ಟ ಮಾನದಂಡ (ಎನ್‌ಎಎಕ್ಯೂಎಸ್)’ಗಳನ್ನು ಪೂರೈಸುವ ಪ್ರದೇಶಗಳಲ್ಲಿ 83.3 ಕೋಟಿ ಜನರು ಮಾತ್ರ ವಾಸಿಸಲಿದ್ದಾರೆ ಎಂದು ಅಧ್ಯಯನ ಹೇಳಿದೆ.

 ಭಾರತವು ತನ್ನ ಈಗಿನ ಮಾಲಿನ್ಯ ನಿಯಂತ್ರಣ ನೀತಿಗಳು ಮತ್ತು ನಿಯಮಾವಳಿಗಳನ್ನು ಸರಿಯಾಗಿ ಅನುಸರಿಸಿದರೂ, 2030ರಲ್ಲಿ ಭಾರತೀಯ ನಾಗರಿಕರು ಪಿಎಮ್2.5 ಕಣಗಳು ಹೆಚ್ಚಿನ ಸಾಂದ್ರತೆಯಲ್ಲಿರುವ ಗಾಳಿಯನ್ನು ಉಸಿರಾಡುವ ಸಾಧ್ಯತೆಯಿದೆ ಎಂದು ವರದಿ ಎಚ್ಚರಿಸಿದೆ.

ಹಿಮಾಲಯವೇ ಕಾರಣ!

ಪಂಜಾಬ್, ಹರ್ಯಾಣ, ಉತ್ತರಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳ ಭಾಗಗಳನ್ನು ಒಳಗೊಂಡ ಭಾರತ-ಗಂಗಾ ಬಯಲು ಪ್ರದೇಶದಲ್ಲಿ ಅತಿ ಹೆಚ್ಚಿನ ಜನರು ಪಿಎಂ2.5 ಕಣಗಳು ದಟ್ಟವಾಗಿರುವ ಗಾಳಿಯನ್ನು ಉಸಿರಾಡುತ್ತಾರೆ ಎಂಬುದನ್ನು ಅಧ್ಯಯನ ಕಂಡುಕೊಂಡಿದೆ.

ಈ ವಲಯದಲ್ಲಿ ಅತಿ ಹೆಚ್ಚಿನ ಮಾಲಿನ್ಯಕಾರಕ ಮೂಲಗಳಿರುವುದು ಹಾಗೂ ಮಾಲಿನ್ಯಕಾರಕ ಗಾಳಿ ಹೊರಹೋಗಲು ಹಿಮಾಲಯ ತಡೆಯಾಗಿರುವುದು ಇದಕ್ಕೆ ಪ್ರಮುಖ ಕಾರಣ.

 ಬಿಹಾರ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಮತ್ತು ಒಡಿಶಾಗಳ ಭಾಗಗಳಲ್ಲಿ ವಾಸಿಸುವ ನಾಗರಿಕರೂ ಗರಿಷ್ಠ ಪಿಎಂ2.5 ಸಾಂದ್ರತೆಯ ಗಾಳಿಯನ್ನು ಸೇವಿಸಲಿದ್ದಾರೆ. ಆದಾಗ್ಯೂ, ಸಹ್ಯ ಅಭಿವೃದ್ಧಿ ನೀತಿಗಳು ಮತ್ತು ಸುಧಾರಿತ ಮಾಲಿನ್ಯ ನಿಯಂತ್ರಣ ತಂತ್ರಜ್ಞಾನಗಳನ್ನು ಸಮ್ಮಿಳಿತಗೊಳಿಸಿದರೆ ಭಾರತದ 85 ಶೇಕಡ ಜನರು ಎನ್‌ಎಎಕ್ಯೂಎಸ್-ಗುಣಮಟ್ಟದ ಗಾಳಿಯನ್ನು ಉಸಿರಾಡಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News