ಭಾರತದ ಉಪಗ್ರಹ ನಾಶಕ ಕ್ಷಿಪಣಿ ಪರೀಕ್ಷೆಯಿಂದ ಬಾಹ್ಯಾಕಾಶಯಾನಿಗಳಿಗೆ ಅಪಾಯ: ನಾಸಾ

Update: 2019-04-02 17:41 GMT

ವಾಶಿಂಗ್ಟನ್, ಎ. 2: ಭಾರತ ತನ್ನ ಒಂದು ಉಪಗ್ರಹವನ್ನು ನಾಶಪಡಿಸಿರುವುದು ‘ಭಯಾನಕ ಸಂಗತಿ’ಯಾಗಿದೆ ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನ್ಯಾಶನಲ್ ಏರೋನಾಟಿಕ್ಸ್ ಆ್ಯಂಡ್ ಸ್ಪೇಸ್ ಅಡ್ಮಿನಿಸ್ಟ್ರೇಶನ್’ (ನಾಸಾ) ಮುಖ್ಯಸ್ಥ ಜಿಮ್ ಬ್ರೈಡನ್‌ಸ್ಟೈನ್ ಮಂಗಳವಾರ ಬಣ್ಣಿಸಿದ್ದಾರೆ. ಇದರಿಂದಾಗಿ ಕಕ್ಷೆಯಲ್ಲಿ 400 ತುಂಡು ಅವಶೇಷಗಳು ಸೃಷ್ಟಿಯಾಗಿವೆ ಹಾಗೂ ಇವುಗಳು ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ಗಗನಯಾತ್ರಿಗಳಿಗೆ ಹೊಸ ಅಪಾಯಗಳನ್ನು ಒಡ್ಡಿವೆ ಎಂದು ಅವರು ಹೇಳಿದ್ದಾರೆ.

ಅವರು ನಾಸಾ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಕಳೆದ ವಾರ ಭಾರತವು, ಭೂಮಿಯ ಕೆಳ ಕಕ್ಷೆಯಲ್ಲಿರುವ ಬೇಹುಗಾರಿಕಾ ಉಪಗ್ರಹಗಳನ್ನು ನಾಶಪಡಿಸುವ ಉದ್ದೇಶದ ಉಪಗ್ರಹ ನಿಗ್ರಹ ಕ್ಷಿಪಣಿ ಪರೀಕ್ಷೆಯನ್ನು ಯಶಸ್ವಿಯಾಗಿ ಮಾಡಿರುವುದನ್ನು ಸ್ಮರಿಸಬಹುದಾಗಿದೆ.

ಎಲ್ಲ ತುಂಡುಗಳು ನಿಗಾ ಇಡಲು ಬೇಕಾದಷ್ಟು ದೊಡ್ಡದಾಗಿಲ್ಲ ಎಂದು ಬ್ರೈಡನ್‌ಸ್ಟೈನ್ ಹೇಳಿದರು. ‘‘ಈಗ ನಾವು, ನಿಗಾ ಇಡಲು ಬೇಕಾದಷ್ಟು ದೊಡ್ಡದಾಗಿರುವ ತುಂಡುಗಳ ಮೇಲೆ ನಿಗಾ ಇಟ್ಟಿದ್ದೇವೆ. ಸುಮಾರು 10 ಸೆಂಟಿ ಮೀಟರ್‌ಗಳು ಹಾಗೂ ಅದಕ್ಕಿಂತ ದೊಡ್ಡದಾಗಿರುವ ತುಂಡುಗಳ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಇಂಥ 60 ತುಂಡುಗಳ ಮೇಲೆ ನಿಗಾ ಇಡಲಾಗಿದೆ’’ ಎಂದರು.

ಭಾರತೀಯ ಉಪಗ್ರಹವನ್ನು ಅತ್ಯಂತ ಕೆಳಗಿನ ಕಕ್ಷೆಯಲ್ಲಿ, ಅಂದರೆ ಸುಮಾರು 300 ಕಿಲೋಮೀಟರ್ ಎತ್ತರದಲ್ಲಿ ನಾಶಪಡಿಸಲಾಗಿದೆ. ಇದು ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ಹಾಗೂ ಹೆಚ್ಚಿನ ಉಪಗ್ರಹಗಳಿಗಿಂತ ತುಂಬಾ ಕೆಳಗಿದೆ.

‘‘ಅಂತರ್‌ರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಮೇಲಿನಿಂದ ಸಾಗುವ ಕಕ್ಷೆಯಲ್ಲಿ ಅವಶೇಷಗಳನ್ನು ಸೃಷ್ಟಿಸುವ ಕಾರ್ಯವೊಂದನ್ನು ನಡೆಸುವುದು ಭಯಾನಕವಾಗಿದೆ’’ ಎಂದು ಅವರು ನುಡಿದರು. ‘‘ಈ ಮಾದರಿಯ ಕೃತ್ಯಗಳು ಭವಿಷ್ಯದ ಮಾನವ ಬಾಹ್ಯಾಕಾಶ ಹಾರಾಟಕ್ಕೆ ಪೂರಕವಾಗಿಲ್ಲ’’ ಎಂದರು.

ಇದು ಅಸ್ವೀಕಾರಾರ್ಹ

‘‘ಇದು ಅಸ್ವೀಕಾರಾರ್ಹ ಹಾಗೂ ನಮಗೆ ಅದರ ಪರಿಣಾಮವೇನು ಎಂಬ ಬಗ್ಗೆ ನಾಸಾ ಸ್ಪಷ್ಟ ನಿರ್ಧಾರವೊಂದನ್ನು ತೆಗೆದುಕೊಳ್ಳಬೇಕಾಗುತ್ತದೆ’’ ಎಂದು ನಾಸಾ ಅಧ್ಯಕ್ಷರು ಹೇಳಿದರು.

 ಬಾಹ್ಯಾಕಾಶ ನಿಲ್ದಾಣ ಮತ್ತು ಉಪಗ್ರಹಗಳಿಗೆ ಢಿಕ್ಕಿ ಹೊಡೆಯುವ ಅಪಾಯವನ್ನು ತಿಳಿಯಲು ಅಮೆರಿಕದ ಸೇನೆಯು ಬಾಹ್ಯಾಕಾಶದಲ್ಲಿ ಅವಶೇಷಗಳ ಮೇಲೆ ನಿಗಾ ಇಟ್ಟಿದೆ. ಅದೀಗ 10 ಸೆಂಟಿ ಮೀಟರ್‌ಗಿಂತ ದೊಡ್ಡ ಸುಮಾರು 23,000 ಅವಶೇಷಗಳನ್ನು ಹಿಂಬಾಲಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News