ಸೌದಿ ಅರೇಬಿಯದಿಂದ ಖಶೋಗಿ ಮಕ್ಕಳಿಗೆ ಭವ್ಯ ಮನೆಗಳು, ತಿಂಗಳಿಗೆ ಲಕ್ಷಾಂತರ ರೂ.

Update: 2019-04-02 17:50 GMT

ವಾಶಿಂಗ್ಟನ್, ಎ. 2: ಟರ್ಕಿಯ ಇಸ್ತಾಂಬುಲ್‌ನಲ್ಲಿರುವ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಸೌದಿ ಏಜಂಟ್‌ಗಳಿಂದ ಹತ್ಯೆಗೀಡಾಗಿರುವ ಸೌದಿ ಪತ್ರಕರ್ತ ಜಮಾಲ್ ಖಶೋಗಿಯ ಮಕ್ಕಳಿಗೆ ಸೌದಿ ಅಧಿಕಾರಿಗಳು ದೊಡ್ಡ ಮನೆಗಳನ್ನು ನೀಡಿದ್ದಾರೆ ಹಾಗೂ ಅವರಿಗೆ ಪ್ರತಿ ತಿಂಗಳು ಸಾವಿರಾರು ರಿಯಾಲ್ ಹಣವನ್ನು ಕೊಡುತ್ತಿದ್ದಾರೆ ಎಂದು ‘ವಾಶಿಂಗ್ಟನ್ ಪೋಸ್ಟ್’ ಸೋಮವಾರ ವರದಿ ಮಾಡಿದೆ.

‘ವಾಶಿಂಗ್ಟನ್ ಪೋಸ್ಟ್’ನ ಅಂಕಣಕಾರರಾಗಿದ್ದ ಖಶೋಗಿಯನ್ನು ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿನ ಸೌದಿ ಅರೇಬಿಯದ ಕೌನ್ಸುಲೇಟ್ ಕಚೇರಿಯಲ್ಲಿ ಸೌದಿ ಅರೇಬಿಯದ ಗುಪ್ತಚರ ದಳದ ಅಧಿಕಾರಿಗಳು ಕೊಂದಿದ್ದರು. ಅವರ ಶವ ಈವರೆಗೂ ಪತ್ತೆಯಾಗಿಲ್ಲ.

ಖಶೋಗಿ ಕುಟುಂಬದ ಸದಸ್ಯರು ಸಾರ್ವಜನಿಕ ಹೇಳಿಕೆಗಳನ್ನು ನೀಡುವಾಗ ಸಂಯಮ ತೋರಿಸುವುದನ್ನು ಮುಂದುವರಿಸುವಂತೆ ನೋಡಿಕೊಳ್ಳುವ ದೀರ್ಘಾವಧಿ ಒಪ್ಪಂದದ ಭಾಗವಾಗಿ ಅವರ ಇಬ್ಬರು ಪುತ್ರರು ಮತ್ತು ಇಬ್ಬರು ಪುತ್ರಿಯರಿಗೆ ಸವಲತ್ತುಗಳನ್ನು ನೀಡಲಾಗುತ್ತಿದೆ ಎಂದು ಪತ್ರಿಕೆ ಹೇಳಿದೆ.

ಖಶೋಗಿ ಮಕ್ಕಳಿಗೆ ಬಂದರು ನಗರ ಜಿದ್ದಾದಲ್ಲಿ ಮನೆಗಳನ್ನು ನೀಡಲಾಗಿದೆ ಹಾಗೂ ಈ ಮನೆಗಳ ಬೆಲೆ 4 ಮಿಲಿಯ ಡಾಲರ್ (ಸುಮಾರು 27.50 ಕೋಟಿ ರೂಪಾಯಿ) ಆಗುತ್ತದೆ ಎಂದು ಪತ್ರಿಕೆ ಹೇಳಿದೆ.

‘‘ನಾಲ್ವರು ಮಕ್ಕಳ ಪೈಕಿ ಹಿರಿಯ ಮಗ ಸಲಾಹ್ ಸೌದಿ ಅರೇಬಿಯದಲ್ಲೇ ವಾಸಿಸಲು ನಿರ್ಧರಿಸಿದ್ದಾರೆ ಹಾಗೂ ಅಮೆರಿಕದಲ್ಲಿ ವಾಸಿಸುತ್ತಿರುವ ಇತರರು ತಮ್ಮ ಮನೆಗಳನ್ನು ಮಾರಾಟ ಮಾಡುವರೆಂದು ನಿರೀಕ್ಷಿಸಲಾಗಿದೆ’’ ಎಂದಿದೆ.

ತಲಾ ಕೋಟಿಗಟ್ಟಳೆ ಡಾಲರ್ ಪರಿಹಾರ?

 ಮನೆಗಳಿಗೆ ಹೆಚ್ಚುವರಿಯಾಗಿ, ಮಕ್ಕಳು ತಿಂಗಳಿಗೆ 10,000 ಡಾಲರ್ (ಸುಮಾರು 6.88 ಲಕ್ಷ ರೂಪಾಯಿ) ಹಣವನ್ನು ಸೌದಿ ಅರೇಬಿಯದಿಂದ ಪಡೆಯುತ್ತಿದ್ದಾರೆ ಹಾಗೂ ಮುಂದಕ್ಕೆ ದೊಡ್ಡ ಪ್ರಮಾಣದಲ್ಲಿ ತಲಾ ಕೋಟಿಗಟ್ಟಳೆ ಡಾಲರ್ ಮೊತ್ತವನ್ನು ಪಡೆಯುವರೆಂದು ನಿರೀಕ್ಷಿಸಲಾಗಿದೆ ಎಂದು ವರದಿ ತಿಳಿಸಿದೆ.

ಸೌದಿ ಅರೇಬಿಯದ ಪ್ರಭಾವಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಭಿನ್ನಮತೀಯ ಪತ್ರಕರ್ತನನ್ನು ಕೊಲ್ಲಿಸಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ.

ಸೌದಿ ಅರೇಬಿಯದ ಪ್ರಭಾವಿ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ಭಿನ್ನಮತೀಯ ಪತ್ರಕರ್ತನನ್ನು ಕೊಲ್ಲಿಸಿದ್ದಾರೆ ಎಂಬುದಾಗಿ ಆರೋಪಿಸಲಾಗಿದೆ. ಆದರೆ, ಹತ್ಯೆಯಲ್ಲಿ ಯುವರಾಜನ ಪಾತ್ರವಿಲ್ಲ ಎಂದು ಸೌದಿ ಅರೇಬಿಯ ಹೇಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News