ವಿಜಯಾ ಬ್ಯಾಂಕ್ ವಿಲೀನ : ಅನ್ಯಾಯದ ವಿರುದ್ಧ ಪ್ರತಿರೋಧವೇಕಿಲ್ಲ ?

Update: 2019-04-03 09:58 GMT

ಹಣ್ಣು ಹಣ್ಣು ಮುದುಕನೊಬ್ಬ ಮರಣಶಯ್ಯೆಯಲ್ಲಿದ್ದಾನೆ. ಆತನಿಗೆ ಕುರುಡು ಬೇರೆ. ಆತನಿಗೆ ಜಗತ್ತು ನೋಡಬೇಕೆಂದು ಹದಿನೆಂಟರ ಹರೆಯದ ಗಟ್ಟಿಮುಟ್ಟಾದ ಆರೋಗ್ಯವಂತ ಯುವಕನೊಬ್ಬನ ಕಣ್ಣು ಕಿತ್ತು ಅಳವಡಿಸುವ ಮೂರ್ಖ ಕೆಲಸ ಯಾರಾದರೂ ಮಾಡಬಹುದೇ...?

ಹಾಗೆ ಮಾಡಿದರೆ ನೀವೇನೆನ್ನುತ್ತೀರಿ...? ಹುಚ್ಚಿನ ಪರಮಾವಧಿಯೆನ್ನಲ್ಲವೇ...? ಒಂದು ವೇಳೆ ಕಣ್ಣು ಕೀಳಿಸಿಕೊಳ್ಳುವ ಯುವಕ ನಿಮ್ಮ ಕುಟುಂಬಿಕನೋ, ಊರವನೋ ಆದರೆ ನೀವು ಸುಮ್ಮನಿರುತ್ತೀರಾ...? ಇಲ್ಲ ತಾನೆ ???.

ನಮ್ಮ ತುಳುನಾಡಿನ ಹೆಮ್ಮೆಯ ಬ್ಯಾಂಕಾದ ವಿಜಯಾ ಬ್ಯಾಂಕನ್ನು ಸಾವಿನಂಚಿನಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಜತೆ ವಿಲೀನಗೊಳಿಸಿ ಇಷ್ಟು ದೊಡ್ಡ ಅನ್ಯಾಯ ಮಾಡಲಾಗುತ್ತಿದ್ದರೂ ನಾವು ಸುಮ್ಮನಿರುವುದು ನ್ಯಾಯವೇ...?

ಅತ್ತಾವರ ಬಾಲಕೃಷ್ಣ ಶೆಟ್ಟರು ಸ್ಥಾಪಿಸಿದ ವಿಜಯಾ ಬ್ಯಾಂಕಿನ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿಸಿದವರು ಮುಲ್ಕಿ ಸುಂದರ್ ರಾಮ್ ಶೆಟ್ರು. ಇದೇ ಸುಂದರ ರಾಮ್ ಶೆಟ್ರ ಹೆಸರನ್ನು ಮಂಗಳೂರಿನ ಸ್ಥಳೀಯ ರಸ್ತೆಯೊಂದಕ್ಕೆ ಹಾಕಲಿಲ್ಲ ಎಂದು ಗಲಾಟೆ ಮಾಡಿದವರು ಸುಂದರರಾಮ್ ಶೆಟ್ರನ್ನು ರಾಷ್ಟ್ರೀಯ ಮಟ್ಟದ ಖ್ಯಾತಿಗೇರಿಸಿದ ಬ್ಯಾಂಕನ್ನು ವಿಲೀನಗೊಳಿಸಿ ಆ ಹೆಸರನ್ನೇ ನಾಮಾವಶೇಷ ಮಾಡುವಾಗ ಯಾಕೆ ಸುಮ್ಮನಿದ್ದಾರೆ???

ಸುಮ್ಮನಿರುವುದು ಮಾತ್ರವಲ್ಲ ಅದಕ್ಕೆ ಮೌನ ಸಮ್ಮತಿಯನ್ನೂ ನೀಡಿದ್ದಾರೆಂದರೆ ಅದು ತುಳುನಾಡಿಗೆ ಬಗೆಯುವ ಅತೀ ದೊಡ್ಡ ದ್ರೋಹವಲ್ಲದೇ ಇನ್ನೇನು?

ನನ್ನದೇ ಕತೆ ಹೇಳುತ್ತೇನೆ ಕೇಳಿ...

ವೈದ್ಯಕೀಯ ಪ್ರಯೋಗಾಲಯ ತಂತ್ರಜ್ಞಾನದ ಶಿಕ್ಷಣ ಪಡೆದು ಎರಡೆರಡು ಬಾರಿ ತೆಳು ಅಂತರದಲ್ಲಿ‌ ಸರಕಾರಿ ಉದ್ಯೋಗದ ಅವಕಾಶ ವಂಚಿತನಾದ ನಾನು ಮಂಗಳೂರಿನ ವೈದ್ಯಕೀಯ ಕಾಲೇಜೊಂದರಲ್ಲಿ ಉದ್ಯೋಗಕ್ಕೆ ಸೇರಿಕೊಂಡೆ. ಮೇಲಧಿಕಾರಿಗಳ ಕಿರುಕುಳದಿಂದಾಗಿ ಸ್ವತಂತ್ರ ಬದುಕು ಬಯಸುವ ನನ್ನನ್ನು ಪರ್ಯಾಯ ದಾರಿಯತ್ತ ಯೋಚಿಸುವಂತೆ ಮಾಡಿತು.

ಸ್ವಂತ ಲ್ಯಾಬೋರೇಟರಿ ಪ್ರಾರಂಭಿಸುವ ಕನಸು‌ ಕಂಡೆ. ಕೈಯಲ್ಲಿ ಬಿಲ್ಲಿ ಕಾಸಿಲ್ಲದೇ ಲ್ಯಾಬೋರೇಟರಿ ಹೇಗೆ ಸ್ಥಾಪಿಸುವುದೆಂದು ಯೋಚಿಸುತ್ತಿರುವಾಗ ನನ್ನವ್ವ ಬೀಡಿ ಕಟ್ಟಿ ಉಳಿತಾಯ ಮಾಡಿದ ಹತ್ತು ಸಾವಿರ ರೂಪಾಯಿಗಳನ್ನು ಕೈಗಿತ್ತರು.

ಅದನ್ನು ನನ್ನ ವಿಶ್ವಾಸದಂತೆ ಬರ್ಕತ್ ಎಂದು ಬಗೆದೆ. ಸಾಲ ಸೌಲಭ್ಯಕ್ಕಾಗಿ ಪ್ರಧಾನ ಮಂತ್ರಿ ಜವಾಹರ್ ರೋಜ್ ಗಾರ್ ಯೋಜನೆಯ ಸಾಲಕ್ಕೆ ವಿಜಯಾ ಬ್ಯಾಂಕಿಗೆ ಅರ್ಜಿ ಸಲ್ಲಿಸಿದೆ.‌ ಹೆಚ್ಚಿನ ಕಿರಿ ಕಿರಿ ಇಲ್ಲದೇ ಐವತ್ತು ಸಾವಿರ ಸಾಲವೂ ಸಿಕ್ಕಿತು. ಲ್ಯಾಬೋರೇಟರಿ ಪ್ರಾರಂಭಿಸುವ ಮೂಲಕ ಸ್ವ ಉದ್ಯೋಗದ ಕನಸು ನನಸಾಗಿಸಿದೆ. ಇಂದು ನನ್ನದೂ ಸೇರಿದಂತೆ ಐದು ಕುಟುಂಬಗಳಿಗೆ ನನ್ನ ಲ್ಯಾಬೋರೇಟರಿ ಪ್ರತ್ಯಕ್ಷ ಜೀವನಾಧಾರ ಒದಗಿಸಿದೆ. ಇದು ನನ್ನೊಬ್ಬನ ಕತೆಯಲ್ಲ. ಹೀಗೆ ದೇಶದಾದ್ಯಂತ ಲಕ್ಷಾಂತರ ಮಂದಿ ಆರ್ಥಿಕ ಸ್ವಾವಲಂಬನೆ ಕಂಡುಕೊಳ್ಳಲು, ಬದುಕು ಕಟ್ಟಿಕೊಳ್ಳಲು ವಿಜಯಾ ಬ್ಯಾಂಕ್‌ ಕಾರಣವಾಗಿದೆ.

ನಮಗೆ ಬದುಕು ಕಟ್ಟಿಕೊಳ್ಳಲು ಸಹಾಯ ನೀಡಿದ ವಿಜಯಾ ಬ್ಯಾಂಕನ್ನು ಮುಚ್ಚಿಸಿದವರನ್ನು ನಾವೆಂದೂ ಕ್ಷಮಿಸಲಾರೆವು. ನಾನು, ನನ್ನ ಪತ್ನಿ, ನನ್ನ ಉದ್ಯೋಗಿಗಳು ನಮಗೆ ಬದುಕು ಕಟ್ಟಿಕೊಟ್ಟ ಬ್ಯಾಂಕನ್ನು ಕೊಂದು ಅದರ ಹೆಣದ ಮೇಲೆ ರಾಜ್ಯಭಾರ ಮಾಡಹೊರಟ ಬ್ಯಾಂಕ್ ಆಫ್ ಬರೋಡದಿಂದ ನಮ್ಮ ಖಾತೆಯನ್ನು ಬೇರೆ ಬ್ಯಾಂಕಿಗೆ ವರ್ಗಾಯಿಸಲಿದ್ದೇವೆ. ಇದು ಈ ಕ್ಷಣದಲ್ಲಿ ನಾವು ತೋರಬಹುದಾದ ಕನಿಷ್ಠ ಪ್ರತಿರೋಧ.... ವಿಜಯಾ ಬ್ಯಾಂಕಿನಿಂದ ಆರ್ಥಿಕ ಸ್ವಾವಲಂಬನೆ ಕಂಡು ಕೊಂಡ ಎಲ್ಲರೂ ತೋರಬಹುದಾದ ಕನಿಷ್ಠ ಪ್ರತಿರೋಧವಿದು.

Writer - ಇಸ್ಮತ್ ಪಜೀರ್

contributor

Editor - ಇಸ್ಮತ್ ಪಜೀರ್

contributor

Similar News