ಭ್ರಷ್ಟಾಚಾರದ ವಿರುದ್ಧ ಹೋರಾಡಲು ಇಂಟರ್‌ಪೋಲ್‌ನೊಂದಿಗೆ ಕೈ ಜೋಡಿಸಿದ ಐಸಿಸಿ

Update: 2019-04-03 18:43 GMT

ದುಬೈ, ಎ.3: ಕ್ರೀಡೆಯಲ್ಲಿನ ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ವಿಸ್ತರಿಸುವ ಅಂಗವಾಗಿ ಜಾಗತಿಕ ಪೊಲೀಸ್ ಸಂಘಟನೆ ಇಂಟರ್‌ಪೋಲ್‌ನೊಂದಿಗೆ ಕೈಜೋಡಿಸಲಾಗುವುದು ಎಂದು ಬುಧವಾರ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ತಿಳಿಸಿದೆ.

ಫ್ರಾನ್ಸ್‌ನ ಲಿಯೊನ್‌ನಲ್ಲಿರುವ ಇಂಟರ್‌ಪೋಲ್ ಮುಖ್ಯ ಕಚೇರಿಗೆ ಭೇಟಿ ನೀಡಿರುವ ಐಸಿಸಿ ಭ್ರಷ್ಟಾಚಾರ ನಿಗ್ರಹ ಘಟಕದ ಪ್ರಧಾನ ಪ್ರಬಂಧಕ ಅಲೆಕ್ಸ್ ಮಾರ್ಷಲ್, ಒಟ್ಟಿಗೆ ಭ್ರಷ್ಟಾಚಾರ ವಿರುದ್ಧ ಹೋರಾಡುವ ಕುರಿತಂತೆ ಚರ್ಚೆ ನಡೆಸಿದ್ದಾರೆ.

‘‘ಐಸಿಸಿ ಹಾಗೂ ಇಂಟರ್‌ಪೋಲ್ ಒಟ್ಟಿಗೆ ಕೆಲಸ ಮಾಡಲು ಉತ್ಸುಕವಾಗಿವೆ ಹಾಗೂ ಕಳೆದ ವಾರ ಲಿಯೊನ್‌ನಲ್ಲಿ ನಮ್ಮ ಮಧ್ಯೆ ನಡೆದ ಸಭೆಯು ಫಲಕಾರಿಯಾಗಿದೆ. ಐಸಿಸಿ ಹಲವು ದೇಶಗಳಲ್ಲಿರುವ ಕಾನೂನು ಜಾರಿ ಏಜೆನ್ಸಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದೆ. ಇಂಟರ್‌ಪೋಲ್‌ನೊಂದಿಗೆ ಕೆಲಸ ಮಾಡುವ ಮೂಲಕ ಅದರ 194 ಸದಸ್ಯರೊಂದಿಗೆ ಸಂಪರ್ಕ ಸಾಧಿಸಿದಂತಾಗುತ್ತದೆ’’ ಎಂದು ಮಾರ್ಷಲ್ ತಿಳಿಸಿದ್ದಾರೆ.

‘‘ಭ್ರಷ್ಟರ ಬಗ್ಗೆ ಆಟಗಾರರಿಗೆ ಅರಿವು ಮೂಡಿಸುವುದು ನಮ್ಮ ಮುಖ್ಯ ಗುರಿ. ವಿಶಾಲವಾದ ಜಾಲವಿರುವ ಇಂಟರ್‌ಪೋಲ್‌ಈ ನಿಟ್ಟಿನಲ್ಲಿ ನಮಗೆ ಅನುಕೂಲ ವಾಗಬಹುದು’’ ಎಂದು ಮಾರ್ಷಲ್ ಹೇಳಿದ್ದಾರೆ.

‘‘ಐಸಿಸಿಯೊಂದಿಗೆ ಕೈಜೋಡಿಸಲು ನಮ್ಮ ಸಂಘಟನೆ ಸಂತೋಷಪಡುತ್ತಿದೆ. ಕ್ರೀಡೆ ಎಲ್ಲರನ್ನು ಒಟ್ಟಾಗಿಸುತ್ತದೆ. ಆದರೆ, ಕ್ರಿಮಿನಲ್‌ಗಳು ಅದರ ಸಮಗ್ರತೆಯನ್ನು ಹಾಳುಗೆಡವಿ ಭಾರೀ ಲಾಭ ಪಡೆಯಲು ಹವಣಿಸುತ್ತಿರುತ್ತಾರೆ’’ ಎಂದು ಇಂಟರ್‌ಪೋಲ್ ಕ್ರಿಮಿನಲ್ ನೆಟ್‌ವರ್ಕ್ ಯೂನಿಟ್‌ನಸಹಾಯಕ ನಿರ್ದೇಶಕ ಜೋಸ್ ಡಿ ಗ್ರೇಸಿಯಾ ಹೇಳಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಕ್ರಿಕೆಟ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಸಮಸ್ಯೆ ಕಾಡುತ್ತಲೇ ಇದೆ. ಕ್ರಿಕೆಟ್‌ನ ಕೆಲವು ಪ್ರಮುಖ ಆಟಗಾರರು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಸಿಲುಕಿ, ಬುಕ್ಕಿಗಳಿಂದ ಹಣ ಸ್ವೀಕರಿಸಿದ ಆರೋಪವನ್ನು ಎದುರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News