ಪ್ರಧಾನಿ ಮೋದಿಗೆ ಯುಎಇಯ ಅತ್ಯುನ್ನತ ನಾಗರಿಕ ಪ್ರಶಸ್ತಿ

Update: 2019-04-04 15:40 GMT

ಹೊಸದಿಲ್ಲಿ,ಎ.4: ಸಂಯುಕ್ತ ಅರಬ್ ಸಂಸ್ಥಾನ(ಯುಎಇ)ಗಳ ಅಧ್ಯಕ್ಷ ಖಲೀಫಾ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಝಾಯೆದ್ ಪದಕ’ವನ್ನು ಘೋಷಿಸಿ ಗೌರವಿಸಿದ್ದಾರೆ.

ಝಾಯೆದ್ ಪದಕವು ಯುಎಇಯ ಅತ್ಯುನ್ನತ ಗೌರವವಾಗಿದ್ದು,ಇದನ್ನು ರಾಜರು,ಅಧ್ಯಕ್ಷರು ಮತ್ತು ಸರಕಾರಗಳ ಮುಖ್ಯಸ್ಥರಿಗೆ ನೀಡಲಾಗುತ್ತದೆ. ಯುಎಇ ಮತ್ತು ಭಾರತ ನಡುವಿನ ಸಂಬಂಧಗಳನ್ನು ಹೆಚ್ಚಿಸಲು ಮೋದಿಯವರ ಪ್ರಯತ್ನಗಳನ್ನು ಮೆಚ್ಚಿ ಅವರಿಗೆ ಈ ಪುರಸ್ಕಾರವನ್ನು ನೀಡಲಾಗಿದೆ.

‘‘ನನ್ನ ಪ್ರಿಯ ಸ್ನೇಹಿತ ಮೋದಿ ಅವರು ಯುಎಇ ಮತ್ತು ಭಾರತಗಳ ನಡುವಿನ ಐತಿಹಾಸಿಕ ಮತ್ತು ಸಮಗ್ರ ವ್ಯೂಹಾತ್ಮಕ ಸಂಬಂಧಗಳನ್ನು ಇನ್ನಷ್ಟು ದೃಢಗೊಳಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ. ಈ ಪುರಸ್ಕಾರವನ್ನು ನೀಡುವ ಮೂಲಕ ಯುಎಇ ಮತ್ತು ಭಾರತಗಳ ನಡುವೆ ಸ್ನೇಹ ಸಂಬಂಧಗಳನ್ನು ಹೆಚ್ಚಿಸುವಲ್ಲಿ ಮತ್ತು ವಿವಿಧ ಕ್ಷೇತ್ರಗಳಲ್ಲಿ ್ಲ ಉಭಯ ರಾಷ್ಟ್ರಗಳ ನಡುವೆ ಸಹಕಾರ ಸೇತುಗಳನ್ನು ವಿಸ್ತರಿಸುವಲ್ಲಿ ಅವರ ಪಾತ್ರ ಮತ್ತು ಪ್ರಯತ್ನಗಳಿಗೆ ನಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದೇವೆ ’’ಎಂದು ಅಬುಧಾಬಿಯ ಯುವರಾಜ ಹಾಗು ಯುಎಇ ಸಶಸ್ತ್ರ ಪಡೆಗಳ ಡೆಪ್ಯೂಟಿ ಸುಪ್ರೀಂ ಕಮಾಂಡರ್ ಮುಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ಟ್ವೀಟಿಸಿದ್ದಾರೆ. ಮೋದಿ ಮೂರು ವರ್ಷಗಳಲ್ಲಿ ಎರಡು ಬಾರಿ ಯುಎಇಗೆ ಭೇಟಿ ನೀಡಿದ್ದು,2018,ಫೆಬ್ರುವರಿಯಲ್ಲಿ ತನ್ನ ಹಿಂದಿನ ಭೇಟಿಯ ಸಂದರ್ಭ ಅಬುಧಾಬಿಯಲ್ಲಿ ಮೊದಲ ಹಿಂದು ದೇವಸ್ಥಾನ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.

ಯುಎಇ ಜೊತೆ ವ್ಯೆಹಾತ್ಮಕ ಪಾಲುದಾರಿಕೆಯ ಹೊಸ ಯುಗವನ್ನು ಆರಂಭಿಸುವಲ್ಲಿ ಅವರ ಪ್ರಮುಖ ಪಾತ್ರವನ್ನು ಗುರುತಿಸಿ ಅವರಿಗೆ ಈ ಗೌರವವನ್ನು ನೀಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News