30 ವರ್ಷಗಳಿಂದ ಈ ರಾಜ್ಯದಲ್ಲಿ ಒಬ್ಬನೇ ಒಬ್ಬ ಮುಸ್ಲಿಂ ಸಂಸದನ ಆಯ್ಕೆಯಾಗಿಲ್ಲ!

Update: 2019-04-05 10:09 GMT

ಅಹ್ಮದಾಬಾದ್, ಎ.5: ಗುಜರಾತ್ ರಾಜ್ಯದಿಂದ ಲೋಕಸಭೆಗೆ ಕೊನೆಯ ಬಾರಿ ಆಯ್ಕೆಯಾದ ಮುಸ್ಲಿಂ ಸಮುದಾಯದ ವ್ಯಕ್ತಿ  ಕಾಂಗ್ರೆಸ್ ಪಕ್ಷದ ಅಹ್ಮದ್ ಪಟೇಲ್ ಆಗಿದ್ದಾರೆ. ಅವರು 1984 ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ 1989ರಲ್ಲಿ ಅವರು ಬಿಜೆಪಿಯ ಚಂದು ದೇಶಮುಖ್ ಅವರೆದುರು ಭರೂಚ್ ಕ್ಷೇತ್ರದಲ್ಲಿ 1.15 ಲಕ್ಷ ಮತಗಳ ಅಂತರದಿಂದ ಪರಾಭವಗೊಂಡಿದ್ದರು. ಆ ವರ್ಷದಿಂದ, ಅಂದರೆ ಕಳೆದ 30 ವರ್ಷಗಳಿಂದ ಲೋಕಸಭೆಗೆ ಗುಜರಾತ್ ರಾಜ್ಯದಿಂದ ಒಬ್ಬನೇ ಒಬ್ಬ ಮುಸ್ಲಿಂ ಜನಪ್ರತಿನಿಧಿ ಆಯ್ಕೆಯಾಗಿಲ್ಲ. ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಪ್ರಮಾಣ ಶೇ 9.5ರಷ್ಟಿದೆ.

ಗುಜರಾತ್ ರಾಜ್ಯ ರಚನೆಯಾದ ನಂತರ 1962ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯಲ್ಲಿ ಗೆದ್ದಿದ್ದ ಏಕೈಕ ಮುಸ್ಲಿಂ ಅಭ್ಯರ್ಥಿ, ಬಾನಸ್ಕಂತ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೊಹಾರ ಚಾವ್ಡಾ ಆಗಿದ್ದರು. ಮುಂದೆ 1977ರಲ್ಲಿ ಭರೂಚ್ ದಿಂದ ಕಾಂಗ್ರೆಸ್ ಪಕ್ಷದ ಅಹ್ಮದ್ ಪಟೇಲ್ ಹಾಗೂ ಅಹ್ಮದಾಬಾದ್ ನಿಂದ ಎಹ್ಸಾನ್ ಜಾಫ್ರಿ ಆಯ್ಕೆಯಾಗಿದ್ದರು.

ಭರೂಚ್ ಲೋಕಸಭಾ ಕ್ಷೇತ್ರದಲ್ಲಿ ರಾಜ್ಯದಲ್ಲಿಯೇ ಅತ್ಯಧಿಕ ಪ್ರಮಾಣದ ಮುಸ್ಲಿಂ ಜನಸಂಖ್ಯೆಯಿದೆ, ಇಲ್ಲಿನ ಒಟ್ಟು 15.64 ಲಕ್ಷ ಮತದಾರರ ಪೈಕಿ ಶೇ 22.2ರಷ್ಟು ಮಂದಿ ಮುಸ್ಲಿಮರಾಗಿದ್ದಾರೆ.

1962ರಿಂದೀಚೆಗೆ ಕಾಂಗ್ರೆಸ್ ಪಕ್ಷ ಒಟ್ಟು ಎಂಟು ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೂ ಅವರಲ್ಲಿ ಕೇವಲ ಅಹ್ಮದ್ ಪಟೇಲ್ ಅವರು ಮಾತ್ರ ಭರೂಚ್ ಕ್ಷೇತ್ರದಿಂದ 1977, 1982 ಹಾಗೂ 1984 ಚುನಾವಣೆಗಳಲ್ಲಿ ಸತತ ಗೆಲುವು ಸಾಧಿಸಿದ್ದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಗುಜರಾತ್ ರಾಜ್ಯದಿಂದ ಕಣಕ್ಕಿಳಿದಿದ್ದ 334 ಅಭ್ಯರ್ಥಿಗಳ ಪೈಕಿ  67 ಮಂದಿ (ಶೇ 19.76) ಮುಸ್ಲಿಮರಾಗಿದ್ದರು. ಆ ವರ್ಷ ಕಾಂಗ್ರೆಸ್ ಕಣಕ್ಕಿಳಿಸಿದ್ದ ಏಕೈಕ ಮುಸ್ಲಿಂ ಅಭ್ಯರ್ಥಿ, ನವ್ಸಾರಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಕ್ಸೂದ್ ಮಿರ್ಜಾ ಆಗಿದ್ದರು. ಇತರ 66 ಮಂದಿ  ಪಕ್ಷೇತರರು ಅಥವಾ ಸಮಾಜವಾದಿ ಪಕ್ಷದಂತಹ ಪಕ್ಷಗಳಿಂದ ಕಣಕ್ಕಿಳಿದಿದ್ದರು. ಹೆಚ್ಚಿನ ಮುಸ್ಲಿಮರು ಪಂಚಮಹಲ್, ಖೇಡ, ಆನಂದ್, ಭರೂಚ್, ನವ್ಸಾರಿ, ಸಬರಕಂತ, ಜಾಮ್ನಗರ್ ಹಾಗೂ ಜುನಾಘಢ್ ಕ್ಷೇತ್ರಗಳಿಂದ ಸ್ಪರ್ಧಿಸಿದ್ದರು.

2009ರ ಚುನಾವಣೆಯಲ್ಲಿ ಲೋಕ್ ಜನಶಕ್ತಿ ಪಾರ್ಟಿ ಅಭ್ಯರ್ಥಿ ಅಬ್ದುಲ್ ಲತೀಫ್ ಶೇಖ್ ಅವರ ಸ್ಪರ್ಧೆಯಿಂದ  ಕಾಂಗ್ರೆಸ್ ಪಕ್ಷದ ಶಂಕರ್ ಸಿಂಗ್ ವಘೇಲ ಕೇವಲ 2,081 ಮತಗಳ ಅಂತರದಿಂದ ಸೋಲುಣ್ಣುವಂತಾಗಿತ್ತು. ಇಲ್ಲಿಂದ ಬಿಜೆಪಿಯ ಪ್ರಭಾತ್ ಸಿಂಗ್ ಚೌಹಾಣ್ ಜಯ ಗಳಿಸಿದ್ದರು. ಲತೀಫ್ ಅವರಿಗೆ 23,615 ಮತಗಳು ದೊರಕಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News