ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಹಸಿರು ಬಣ್ಣದ ಮೊರೆಹೋದ ಬಿಜೆಪಿ !

Update: 2019-04-05 15:09 GMT

ಶ್ರೀಗನರ, ಎ. 6: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳು ವಿವಿಧ ತಂತ್ರಗಳನ್ನು ಅನುಸರಿಸುತ್ತಿವೆ. ಮುಸ್ಲಿಂ ಬಾಹುಳ್ಯವುಳ್ಳ ಕಾಶ್ಮೀರದಲ್ಲಿ ಬಿಜೆಪಿ ತನ್ನ ಟ್ರೇಡ್ ಮಾರ್ಕ್ ಕೇಸರಿಯ ಬದಲು ಹಸಿರಿಗೆ ಮೊರೆ ಹೋಗಿದೆ.

ಶ್ರೀನಗರದ ತನ್ನ ಅಭ್ಯರ್ಥಿ ಖಾಲಿದ್ ಜಹಾಂಗೀರ್ ಪರ ಬಿರುಸಿನ ಪ್ರಚಾರ ನಡೆಸಲು ಬಿಜೆಪಿ ಪಕ್ಷದ ಬಣ್ಣವಾದ ಕೇಸರಿ ಬದಲಿಗೆ ಹಸಿರು ಬಣ್ಣದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಜಾಹೀರಾತು ಪ್ರಕಟಿಸಿದೆ. ಕಾಶ್ಮೀರದಲ್ಲಿ ಹಸಿರು ಪ್ರತ್ಯೇಕತಾವಾದಿಗಳ ಭಾವನೆಯನ್ನು ಕೂಡ ಪ್ರತಿನಿಧಿಸುತ್ತದೆ.

  ಮಾಜಿ ಪತ್ರಕರ್ತರಾಗಿರುವ ಜಹಾಂಗೀರ್ ರಾಜಕೀಯ ಧುರೀಣರಾದ ನ್ಯಾಶನಲ್ ಕಾನ್ಫರೆನ್ಸ್ (ಎನ್‌ಸಿ)ನ ಅಧ್ಯಕ್ಷ ಹಾಗೂ ಹಾಲಿ ಸಂಸದ ಫಾರೂಕ್ ಅಬ್ದುಲ್ಲಾ, ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ (ಪಿಡಿಪಿ)ಯ ಅಗಾ ಮುಹ್ಸಿನ್, ಪೀಪಲ್ಸ್ ಕಾನ್ಫರೆನ್ಸ್‌ನ (ಪಿಸಿ) ಇರ್ಫಾನ್ ಅನ್ಸಾರಿ ವಿರುದ್ಧ ಸ್ಪರ್ಧಿಸಲಿದ್ದಾರೆ.

  ಸ್ಥಳೀಯ ಹಲವು ದಿನಪತ್ರಿಕೆಗಳಲ್ಲಿ ಬಿಜೆಪಿ ಹಸಿರು ಜಾಹೀರಾತು ಪ್ರಕಟಿಸಿದೆ. ಅಲ್ಲದೆ, ಜಹಾಂಗೀರ್ ಅವರನ್ನು ಬೆಂಬಲಿಸಿ ಇದೇ ರೀತಿಯ ಹೋರ್ಡಿಂಗ್ ಅನ್ನು ಸ್ಥಾಪಿಸಿದೆ. ಈ ಬಗ್ಗೆ ಸಾಮಾಜಿಕ ಜಾಲ ತಾಣದಲ್ಲಿ ನೆಟ್ಟಿಗರಿಂದ ವಿಭಿನ್ನ ಅಭಿಪ್ರಾಯಗಳು ವ್ಯಕ್ತವಾಗಿವೆ.

‘‘ಕಾಶ್ಮೀರದಲ್ಲಿ ಬಣ್ಣಗಳು ಬದಲಾಗುತ್ತಿವೆ. ಹೇಗೆ ? ಅದು ಚುನಾವಣೆಯ ರಾಜಕೀಯ ಬಣ್ಣ. ಕೇಸರಿ ಹೇಗೆ ಹಸಿರಾಯಿತು ! ಇದು ಬಿಜೆಪಿಯ ಬಣ್ಣದ ತಟ್ಟೆಯಲ್ಲಿ ಪಿಡಿಪಿ ಬಿಟ್ಟು ಹೋದ ಅಳಿಸಲಾಗದ ಗುರುತೇ ?’’ ಎಂದು ಪಿಡಿಪಿಯ ಮಾಜಿ ನಾಯಕ ಹಾಗೂ ಸಚಿವ ಹಸೀಬ್ ದ್ರಾಬು ಟ್ವೀಟ್ ಮಾಡಿದ್ದಾರೆ.

‘‘ತುಂಬಾ ಕೂತೂಹಲಕರ. ಕಾಶ್ಮೀರದಲ್ಲಿ ಬಿಜೆಪಿ ಹಸಿರನ್ನು ಪ್ರತಿನಿಧಿಸುತ್ತಿದೆ. ಯಾರು ಯಾರನ್ನು ವಂಚಿಸುತ್ತಿದ್ದಾರೆ.’’ ಎಂದು ಓರ್ವ ನೆಟ್ಟಿಗ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News