ಅಹ್ಮದ್ ಪಟೇಲ್‌ರನ್ನು ಹೆಸರಿಸಿರುವ ಆರೋಪಪಟ್ಟಿ ಮಾಧ್ಯಮಗಳಿಗೆ ಸೋರಿಕೆ

Update: 2019-04-05 15:18 GMT

ಹೊಸದಿಲ್ಲಿ, ಎ.5: ಆಗಸ್ಟಾ ವೆಸ್ಟ್‌ಲ್ಯಾಂಡ್ ಮತ್ತು ವಿವಿಐಪಿ ಕಾಪ್ಟರ್ ಒಪ್ಪಂದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಮಧ್ಯವರ್ತಿ ಕ್ರಿಶ್ಚಿಯನ್ ಮಿಷೆಲ್ ವಿರುದ್ಧ ಜಾರಿ ನಿರ್ದೇಶನಾಲಯ(ಈ.ಡಿ)ವು ಗುರುವಾರ ದಿಲ್ಲಿಯ ಪಟಿಯಾಲಾ ಹೌಸ್ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಅಹ್ಮದ್ ಪಟೇಲ್ ಮತ್ತು ಓರ್ವ ‘ಮಿಸೆಸ್ ಗಾಂಧಿ’ಯನ್ನು ಹೆಸರಿಸಲಾಗಿದೆ.

ಆರೋಪಗಳ ಕುರಿತು ಆಂಗ್ಲ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಪಟೇಲ್,ಇವೆಲ್ಲ ಆಧಾರರಹಿತ,ಹಾಸ್ಯಾಸ್ಪದ ಆರೋಪಗಳಾಗಿವೆ ಮತ್ತು ಚುನಾವಣಾ ಗಿಮಿಕ್ ಆಗಿದೆ ಎಂದು ಹೇಳಿದರು. ನ್ಯಾಯಾಂಗದಲ್ಲಿ ತನಗೆ ನಂಬಿಕೆಯಿದೆ ಎಂದರು.

ನ್ಯಾಯಾಲಯವು ಆರೋಪಪಟ್ಟಿಯ ಸಂಜ್ಞೇಯತೆಯನ್ನು ಗಣನೆಗೆ ತೆಗೆದುಕೊಳ್ಳುವ ಮತ್ತು ಆರೋಪಿಗೆ ಪ್ರತಿಯನ್ನು ಒದಗಿಸುವ ಮೊದಲೇ ಅದನ್ನು ಮಾಧ್ಯಮಗಳಿಗೆ ಸೋರಿಕೆ ಮಾಡಲಾಗಿದೆ ಎಂದು ಮಿಷೆಲ್ ಆರೋಪಿಸಿದ್ದು, ನ್ಯಾಯಾಲಯವು ಆರೋಪಪಟ್ಟಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಹೇಗೆ ಎಂದು ಪ್ರಶ್ನಿಸಿ ಈ.ಡಿ.ಗೆ ನೋಟಿಸನ್ನು ಹೊರಡಿಸಿದೆ.

 ಪ್ರಕರಣವು ವಿವಿಐಪಿಗಳ ಪ್ರಯಾಣಕ್ಕಾಗಿ 12 ಐಷಾರಾಮಿ ಹೆಲಿಕಾಪ್ಟರ್‌ಗಳ ಖರೀದಿಗಾಗಿ 3,600 ಕೋ.ರೂ.ಗಳ ಒಪ್ಪಂದಕ್ಕೆ ಸಂಬಂಧಿಸಿದೆ. ಇಟಲಿಯ ಹೆಲಿಕಾಪ್ಟರ್ ನಿರ್ಮಾಣ ಸಂಸ್ಥೆ ಆಗಸ್ಟಾ ವೆಸ್ಟ್‌ಲ್ಯಾಂಡ್‌ನೊಂದಿಗಿನ ಈ ಒಪ್ಪಂದಕ್ಕೆ ಹಿಂದಿನ ಮನಮೋಹನ ಸಿಂಗ್ ಸರಕಾರವು 2007ರಲ್ಲಿ ಸಹಿ ಹಾಕಿತ್ತು.

ಈ ಒಪ್ಪಂದ ಏರ್ಪಡುವಂತಾಗಲು ಲಂಚ ಪಾವತಿಸಿದ್ದರೆಂಬ ಆರೋಪದಲ್ಲಿ ತನಿಖೆಗೊಳಗಾಗಿರುವ ಮೂವರು ಮಧ್ಯವರ್ತಿಗಳಲ್ಲಿ ಬ್ರಿಟಿಷ್ ಪ್ರಜೆ ಮಿಷೆಲ್ ಓರ್ವನಾಗಿದ್ದಾನೆ.

ವಾಯುಪಡೆ ಅಧಿಕಾರಿಗಳು,ಸರಕಾರದ ಹಿರಿಯ ಅಧಿಕಾರಿಗಳು,ರಕ್ಷಣಾ ಸಚಿವಾಲಯದ ಅಧಿಕಾರಿಗಳು ಮತ್ತು ಆಗಿನ ಆಡಳಿತ ಪಕ್ಷದ ಹಿರಿಯ ರಾಜಕೀಯ ನಾಯಕರಿಗೆ ನೀಡಲಾಗಿದ್ದ 30 ಮಿ.ಯುರೋ ಲಂಚಕ್ಕೆ ಈ ಸಂಕೇತ ಶಬ್ದಗಳು ಸಂಬಂಧಿಸಿವೆ ಎಂದು ಆರೋಪಪಟ್ಟಿಯಲ್ಲಿ ಹೇಳಲಾಗಿದೆ. ‘ಸಂಕೀರ್ಣ ವ್ಯವಸ್ಥೆ’ಯೊಂದರ ಮೂಲಕ ಈ ಹಣವನ್ನು ರವಾನಿಸಲಾಗಿತ್ತು ಮತ್ತು ‘ಹವಾಲಾ’ ಮಾರ್ಗದ ಮೂಲಕ ಪಡೆದುಕೊಳ್ಳಲಾಗಿತ್ತು ಎಂದು ಈ.ಡಿ.ಆರೋಪಿಸಿದೆ.

ಈ.ಡಿ. ಆರೋಪಪಟ್ಟಿಯು ಕಾಪ್ಟರ್ ಒಪ್ಪಂದದ ಹಿಂದಿನ ‘ಚಾಲಕ ಶಕ್ತಿ’ ಎಂದು ಉಲ್ಲೇಖಿಸಲಾಗಿರುವ ‘ಮಿಸೆಸ್ ಗಾಂಧಿ’ಸೇರಿದಂತೆ ವಿವಿಧ ವ್ಯಕ್ತಿಗಳಿಗೆ ಮಿಷೆಲ್‌ನಿಂದ ಫೆ.2008 ಮತ್ತು ಅ.2009ರ ನಡುವಿನ ಸರಣಿ ‘ರವಾನೆ’ಗಳನ್ನು ಪಟ್ಟಿ ಮಾಡಿದೆ.

 ಆಗಿನ ಪ್ರಧಾನಿ ಮನಮೋಹನ ಸಿಂಗ್ ಅವರ ಮೇಲೆ ಒತ್ತಡ ಹೇರಲು ಹಿರಿಯ ಕಾಂಗ್ರೆಸ್ ನಾಯಕರನ್ನು ಮಿಷೆಲ್ ಬಳಸಿಕೊಂಡಿದ್ದ ಎಂದು ಆರೋಪಪಟ್ಟಿಯಲ್ಲಿ ಆಪಾದಿಸಲಾಗಿದೆ. ಆಗಸ್ಟಾ ವೆಸ್ಟ್‌ಲ್ಯಾಂಡ್‌ನ ಮಾತೃಸಂಸ್ಥೆಯಾದ ಫಿನ್‌ಮೆಕಾನಿಯಾ(ಈಗ ಲಿಯೊನಾರ್ಡೊ)ದ ಮಾಜಿ ಮುಖ್ಯಸ್ಥ ಗಿಸೆಪ್ಪೆ ಒರ್ಸಿಗೆ ಮಿಷೆಲ್ 2009,ಆ.28ರಂದು ಬರೆದಿದ್ದ ಪತ್ರವೊಂದನ್ನು ತನಿಖಾಧಿಕಾರಿಗಳು ಪ್ರಸ್ತಾಪಿಸಿದ್ದಾರೆ.

ಪೂರಕ ಆರೋಪಪಟ್ಟಿಯು 52 ಪುಟಗಳಷ್ಟ್ಟಿದ್ದು, 3,000 ಪುಟಗಳಿಗೂ ಅಧಿಕ ಹೆಚ್ಚುವರಿ ದಾಖಲೆಗಳನ್ನು ಹೊಂದಿದೆ. ಪ್ರಕರಣದಲ್ಲಿ ಈ ಹಿಂದೆ ಆರೋಪಿಗಳೆಂದು ಹೆಸರಿಸಲಾಗಿದ್ದ 38 ಜನರೊಂದಿಗೆ ಮಿಷೆಲ್‌ನ ವ್ಯವಹಾರ ಪಾಲುದಾರ ಡೇವಿಡ್ ಸಿಮ್ಸ್ ಮತ್ತು ಎರಡು ಕಂಪನಿಗಳಾದ ಗ್ಲೋಬಲ್ ಸರ್ವಿಸಿಸ್ ಎಫ್‌ಇಝ್,ಯುಎಇ ಮತ್ತು ಗ್ಲೋಬಲ್ ಟ್ರೇಡ್ ಆ್ಯಂಡ್ ಕಾಮರ್ಸ್ ಲಿ.ಗಳನ್ನೂ ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ.

ಲೋಕಸಭಾ ಚುನಾವಣೆಗಾಗಿ ಪ್ರಚಾರ ಉತ್ತುಂಗದಲ್ಲಿರುವಾಗಲೇ ಈ.ಡಿ.ಆರೋಪಪಟ್ಟಿಯನ್ನು ಸಲ್ಲಿಸಿದೆ. ಮುಖ್ಯವಾಗಿ ರಫೇಲ್ ಒಪ್ಪಂದ ವಿವಾದಿಂದ ಗಮನವನ್ನು ಬೇರೆಡೆಗೆ ಸೆಳೆಯಲು ತನ್ನ ಉನ್ನತ ನಾಯಕರನ್ನು ಗುರಿಯಾಗಿಸಿಕೊಂಡು ಕಾಪ್ಟರ್ ತನಿಖೆಯನ್ನು ಕೆದಕಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News