ರಸೆಲ್ ಅಬ್ಬರದ ಬ್ಯಾಟಿಂಗ್: ಕೋಲ್ಕತಾ ತಂಡಕ್ಕೆ ಯುಗಾದಿ ಬೆಲ್ಲ

Update: 2019-04-05 18:33 GMT

ಬೆಂಗಳೂರು, ಎ.6: ಇಲ್ಲಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶುಕ್ರವಾರ ಕೋಲ್ಕತಾ ನೈಟ್ ರೈಡರ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ಮಧ್ಯೆ ನಡೆದ 17ನೇ ಐಪಿಎಲ್ ಪಂದ್ಯದಲ್ಲಿ ಕೋಲ್ಕತಾ ತಂಡವು ಆರ್‌ಸಿಬಿಯನ್ನು 5 ವಿಕೆಟ್‌ಗಳಿಂದ ಮಣಿಸಿದೆ. ಆರ್‌ಸಿಬಿ ನೀಡಿದ 206 ರನ್‌ಗಳ ಗುರಿ ಬೆನ್ನಟ್ಟಿದ್ದ ಕೋಲ್ಕತಾ 19.1 ಓವರ್‌ಗಳಲ್ಲಿ 206 ರನ್ ಗಳಿಸಿತು. ತಂಡಕ್ಕೆ ಕ್ರಿಸ್ ಲಿನ್ (43, 31 ಎಸೆತ, 4 ಬೌಂಡರಿ, 2 ಸಿಕ್ಸರ್) ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡಿ ಅಡಿಪಾಯ ಹಾಕಿಕೊಟ್ಟರು. ಸುನೀಲ್ ನರೈನ್ (10) ವಿಫಲರಾದರು. ರಾಬಿನ್ ಉತ್ತಪ್ಪ (33, 25 ಎಸೆತ 6 ಬೌಂಡರಿ) ಮತ್ತೊಮ್ಮೆ ಮಿಂಚಿದರು. ನಿತೀಶ್ ರಾಣಾ (37, 23 ಎಸೆತ, 1 ಬೌಂಡರಿ, 2 ಸಿಕ್ಸರ್) ಮಧ್ಯಮ ಕ್ರಮಾಂಕಕ್ಕೆ ಬಲ ತುಂಬಿದರು.

ನಾಯಕ ದಿನೇಶ್ ಕಾರ್ತಿಕ್(19, 15 ಎಸೆತ, 1 ಬೌಂಡರಿ, 1 ಸಿಕ್ಸರ್) ಹಾಗೂ ಆ್ಯಂಡ್ರೆ ರಸೆಲ್(48, 13 ಎಸೆತ, 1 ಬೌಂಡರಿ, 7 ಸಿಕ್ಸರ್) ಮೇಲೆ ತಂಡವನ್ನು ಗೆಲ್ಲಿಸುವ ಒತ್ತಡ ಬಿತ್ತು. ಕಾರ್ತಿಕ್, ನವದೀಪ್ ಸೈನಿಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ರಸೆಲ್ 7 ಭರ್ಜರಿ ಸಿಕ್ಸರ್ ಸಿಡಿಸಿ ಅಸಾಧ್ಯವಾದ ಗೆಲುವನ್ನು ಸಾಧ್ಯವಾಗಿಸಿದರು. 19ನೇ ಓವರ್ ಒಂದರಲ್ಲೇ ರಸೆಲ್ 29 ರನ್ ಚಚ್ಚಿ ಪಂದ್ಯವನ್ನು ಕೆಕೆಆರ್‌ನತ್ತ ತಿರುಗಿಸಿದರು.

ಆರ್‌ಸಿಬಿ ಪರ ಸ್ಪಿನ್ನರ್‌ಗಳಾದ ಪವನ್ ನೇಗಿ(21ಕ್ಕೆ 2), ನವದೀಪ್ ಸೈನಿ (34ಕ್ಕೆ 2) ಹಾಗೂ ಯಜುವೇಂದ್ರ ಚಹಾಲ್ (24ಕ್ಕೆ 1) ಉತ್ತಮ ಬೌಲಿಂಗ್ ಮಾಡಿದರು.

ಪಂದ್ಯದಲ್ಲಿ ಟಾಸ್ ಗೆದ್ದು ಕೋಲ್ಕತಾ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತ್ತು. ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ ನಿಗದಿತ 20 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 205 ರನ್ ಗಳಿಸಿತ್ತು.

ಆರ್‌ಸಿಬಿ ಪರ ಆರಂಭಿಕರಾಗಿ ಕಣಕ್ಕಿಳಿದ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಮೊದಲ ವಿಕೆಟ್ ಜೊತೆಯಾಟದಲ್ಲಿ 7.5 ಓವರ್‌ಗಳಲ್ಲಿ 64 ರನ್ ಸೇರಿಸಿದರು.

 ಪಾರ್ಥಿವ್ 24 ಎಸೆತಗಳಲ್ಲಿ 3 ಬೌಂಡರಿಗಳ ನೆರವಿನಿಂದ 25 ರನ್ ಗಳಿಸಿ ನಿತೀಶ್ ರಾಣಾ ಎಸೆತದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು.

ನಾಯಕ ಕೊಹ್ಲಿ ಜವಾಬ್ದಾರಿ ಅರಿತು ಬ್ಯಾಟಿಂಗ್(84, 49 ಎಸೆತ, 9 ಬೌಂಡರಿ, 2 ಸಿಕ್ಸರ್) ಮಾಡಿ ತಂಡದ ಮೊತ್ತವನ್ನು ಶೀಘ್ರಗತಿಯಲ್ಲಿ ಹೆಚ್ಚಿಸಿದರು. ಅವರಿಗೆ ಸ್ಫೋಟಕ ಹೊಡೆತಗಳ ಆಟಗಾರ ಎಬಿ ಡಿವಿಲಿಯರ್ಸ್(63, 32 ಎಸೆತ, 5 ಬೌಂಡರಿ, 4 ಸಿಕ್ಸರ್) ಸಾಥ್ ನೀಡಿದರು. 7 ಇನಿಂಗ್ಸ್‌ಗಳ ಬಳಿಕ ಕೊಹ್ಲಿ ಅರ್ಧಶತಕದ ಮುಖ ಕಂಡರು. ಉಭಯ ಆಟಗಾರರು ಜೊತೆಯಾಗಿ ಎರಡನೇ ವಿಕೆಟ್‌ಗೆ 108 ರನ್ ಕಲೆ ಹಾಕಿದರು. ಕೊಹ್ಲಿ ಅವರು ಕುಲದೀಪ್ ಎಸೆತದಲ್ಲಿ ಅವರಿಗೆ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದರು.

ಆ ಬಳಿಕ ಆಗಮಿಸಿದ ಮಾರ್ಕಸ್ ಸ್ಟೋನಿಸ್ (28) ಹಾಗೂ ಡಿವಿಲಿಯರ್ಸ್ ಒಂದಷ್ಟು ಹೊತ್ತು ಕೋಲ್ಕತಾ ಬೌಲರ್‌ಗಳನ್ನು ಕಾಡಿದರು. ಡಿವಿಲಿಯರ್ಸ್ ನರೈನ್‌ಗೆ ವಿಕೆಟ್ ಒಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News