ಯುಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಪೆಟ್ರೋಲ್ ಪಂಪ್ ನೌಕರನ ಪುತ್ರ

Update: 2019-04-06 11:57 GMT

ಇಂದೋರ್, ಎ.6: ಸಮಾಜದಲ್ಲಿ ಬದಲಾವಣೆ ತರಬಲ್ಲ ಏನಾದರೂ ಅಸಾಧಾರಣ ಸಾಧನೆ ಮಾಡಬೇಕು ಎಂದು ಎಂಟು ವರ್ಷಗಳ ಹಿಂದೆ ಪ್ರಾಣ ತ್ಯಜಿಸುವ ಮುನ್ನ ತಾತ ಹೇಳಿದ ಕೊನೆಯ ಮಾತುಗಳಿಂದ ಪ್ರಭಾವಿತರಾಗಿದ್ದ 22 ವರ್ಷದ ಪ್ರದೀಪ್ ಸಿಂಗ್ ಯುಪಿಎಸ್‍ಸಿ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 93ನೇ ರ್ಯಾಂಕ್ ಪಡೆದು ತಮ್ಮ ಅಜ್ಜನ ಕನಸನ್ನು ನನಸಾಗಿದ್ದಾರೆ.

ಐಎಎಸ್ ಪರೀಕ್ಷೆಗೆ ಕಲಿಯುತ್ತಿದ್ದ ಪ್ರದೀಪ್ ಗೆ ಬೆಂಬಲವಾಗಿ ಆತನ ಇಡೀ ಕುಟುಂಬ ಅದೆಷ್ಟು ದೃಢತೆಯಿಂದ ನಿಂತಿತ್ತೆಂದರೆ ಆತನ ಪರೀಕ್ಷೆ ಸಂದರ್ಭ ತಾಯಿಗೆ ಕಾಡಿದ್ದ ಅನಾರೋಗ್ಯವನ್ನೂ ಆತನಿಂದ ಮುಚ್ಚಿಡಲಾಗಿತ್ತು.

ಪೆಟ್ರೋಲ್ ಪಂಪ್ ಉದ್ಯೋಗಿಯಾಗಿರುವ ಪ್ರದೀಪ್ ತಂದೆ ಮನೋಜ್ ಸಿಂಗ್ ತಮ್ಮ ಮಗನ ಯುಪಿಎಸ್‍ಸಿ ಪರೀಕ್ಷೆಗೆ ತಯಾರಿ ನಡೆಸಲು ಹಣದ ಅಗತ್ಯತೆ ಪೂರೈಸಲು ಮನೆಯನ್ನು ಕೂಡ ಮಾರಿದ್ದರು. “ನನ್ನ ಕುಟುಂಬ ನನಗಾಗಿ ಪಟ್ಟ ಶ್ರಮವನ್ನು ಮರೆಯಲಾರೆ. ಪರೀಕ್ಷೆಯಲ್ಲಿ ತೇರ್ಗಡೆಯಾದ ಸಾಧನೆ ಆರಂಭ ಮಾತ್ರ, ಇನ್ನೂ ಬಹಳಷ್ಟು ಸಾಧಿಸಲು ಬಾಕಿಯಿದೆ'' ಎಂದು ಪ್ರದೀಪ್ ಹೇಳುತ್ತಾರೆ.

ಐಐಪಿಎಸ್ ಇಂದೋರ್ ಇಲ್ಲಿಂದ ಬಿ.ಕಾಂ ಪದವಿ ಪಡೆದಿರುವ ಪ್ರದೀಪ್ ನಂತರ ದಿಲ್ಲಿಯಲ್ಲಿ ಯುಪಿಎಸ್‍ಸಿ ಪರೀಕ್ಷೆಗೆ ತರಬೇತಿ ಪಡೆದಿದ್ದರು. ``ಬಡತನ ಹಾಗೂ ತಳ ಮಟ್ಟದಲ್ಲಿ ಆರೋಗ್ಯ ಸೇವೆಗಳ ಕೊರತೆಯನ್ನು ಗಮಸಿದ್ದೇನೆ. ಈ ನಿಟ್ಟಿನಲ್ಲಿ ಕೆಲಸ ಮಾಡಲು ಇಚ್ಛಿಸುತ್ತೇನೆ,'' ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News