ಐಪಿಎಲ್ ಫೈನಲ್ ಪಂದ್ಯ ಹೈದರಾಬಾದ್‌ಗೆ ಸ್ಥಳಾಂತರ ಸಾಧ್ಯತೆ

Update: 2019-04-09 02:03 GMT

ಹೊಸದಿಲ್ಲಿ, ಎ.8: ಚೆನ್ನೈನಲ್ಲಿ ಐಪಿಎಲ್ ಫೈನಲ್ ಪಂದ್ಯ ಆಯೋಜನೆಯ ಆತಿಥ್ಯವನ್ನು ತನ್ನಲ್ಲೇ ಉಳಿಸಿಕೊಳ್ಳಲು ಅಗತ್ಯವಿರುವ ಅನುಮತಿಯನ್ನು ಒಂದು ವಾರದೊಳಗೆ ಪಡೆಯಬೇಕೆಂದು ತಮಿಳುನಾಡು ಕ್ರಿಕೆಟ್ ಸಂಸ್ಥೆಗೆ(ಟಿಎನ್‌ಸಿಎ)ಬಿಸಿಸಿಐ ಆಡಳಿತ ನೋಡಿಕೊಳ್ಳುತ್ತಿರುವ ಆಡಳಿತಾಧಿಕಾರಿ ಸಮಿತಿ(ಸಿಒಎ) ಗಡುವು ನೀಡಿದೆ.

ಬಿಸಿಸಿಐನ ಮೂವರು ಪದಾಧಿಕಾರಿಗಳೊಂದಿಗೆ ದಿಲ್ಲಿಯಲ್ಲಿ ಸಭೆ ನಡೆಸಿದ ಆಡಳಿತಾಧಿಕಾರಿ ಸಮಿತಿ(ಸಿಒಎ)ಐಪಿಎಲ್ ಹಾಗೂ ಕ್ರಿಕೆಟ್ ಚಟುವಟಿಕೆ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದೆ.

ಚೆನ್ನೈನ ಚಿಪಾಕ್ ಸ್ಟೇಡಿಯಂನಲ್ಲಿ ಸ್ಟಾಂಡ್‌ಗಳ ವಿಚಾರದಲ್ಲಿ ವಿವಾದ ಇನ್ನೂ ಬಗೆಹರಿದಿಲ್ಲ. ಹೀಗಾಗಿ ಮೇ 12 ರಂದು ನಡೆಯಲಿರುವ ಐಪಿಎಲ್ ಫೈನಲ್ ಪಂದ್ಯವನ್ನು ಹೈದರಾಬಾದ್‌ಗೆ ಸ್ಥಳಾಂತರಿಸುವ ಕುರಿತಂತೆ ಬಿಸಿಸಿಐ ಒಲವು ತೋರಿಸಿರುವುದರಿಂದ ಬಲಿಷ್ಠ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹತಾಶೆಗೊಂಡಿದೆ ಎನ್ನಲಾಗಿದೆ.

2012ರಿಂದ ಚೆನ್ನೈನ ಚಿದಂಬರಂ ಕ್ರಿಕೆಟ್ ಸ್ಟೇಡಿಯಂನ ಐ,ಜೆ ಹಾಗೂ ಕೆ-ಮೂರು ಖಾಲಿ ಸ್ಟಾಂಡ್‌ಗಳ ಕುರಿತ ವಿವಾದ ಜೀವಂತವಾಗಿದ್ದು, ತಮಿಳುನಾಡು ಕ್ರಿಕೆಟ್ ಸಂಸ್ಥೆ(ಟಿಎನ್‌ಸಿಎ)ಐಪಿಎಲ್ ಅಥವಾ ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸಿದ ಸಂದರ್ಭದಲ್ಲಿ ಈ ಮೂರು ಸ್ಟ್ಯಾಂಡ್‌ಗಳಿಂದ ಪ್ರೇಕ್ಷಕರನ್ನು ದೂರ ಇಡಲಾಗುತ್ತಿದೆ. ಈ 3 ಸ್ಟಾಂಡ್‌ಗಳು ಬಳಕೆಗೆ ಯೋಗ್ಯವಾಗಿವೆ ಎಂದು ಸ್ಥಳೀಯ ಮಹಾನಗರ ಪಾಲಿಕೆ ಇನ್ನೂ ಪ್ರಮಾಣಪತ್ರ ನೀಡಿಲ್ಲ. ‘‘ಖಾಲಿ ಇರುವ ಮೂರು ಸ್ಟಾಂಡ್‌ಗಳು 12,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ. ಒಂದು ವೇಳೆ ಚೆನ್ನೈ ತಂಡ ಪ್ಲೇ- ಆಫ್‌ಗೆ ತೇರ್ಗಡೆಯಾದರೆ, ತವರು ಮೈದಾನದ ಲಾಭ ವಂಚಿತವಾಗುವುದನ್ನು ನಾವು ಬಯಸುವುದಿಲ್ಲ. ನಾವು ಚೆನ್ನೈಗೆ ಸಮಸ್ಯೆ ಬಗೆಹರಿಸಿಕೊಳ್ಳಲು ಒಂದು ವಾರ ಗಡುವು ನೀಡಿದ್ದೇವೆ. ಒಂದು ವೇಳೆ ಅದು ಪ್ರಮಾಣಪತ್ರ ನೀಡಲು ವಿಫಲವಾದರೆ, ಫೈನಲ್ ಪಂದ್ಯ ಹೈದರಾಬಾದ್‌ಗೆ ವರ್ಗಾವಣೆಯಾಗಲಿದೆ. ಪ್ಲೇ-ಆಫ್ ಹಾಗೂ ಎಲಿಮಿನೇಟರ್ ಪಂದ್ಯಗಳು ಬೆಂಗಳೂರು ಪಾಲಾಗಲಿದೆ. 2018ರ ಫೈನಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ರನ್ನರ್ಸ್ ಅಪ್ ಎನಿಸಿಕೊಂಡಾಗ ಪಂದ್ಯ ಆತಿಥ್ಯವಹಿಸಿತ್ತು’’ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News