ಕೋಲ್ಕತಾ ವಿರುದ್ಧ ಚೆನ್ನೈಗೆ 7 ವಿಕೆಟ್ ಜಯ

Update: 2019-04-09 18:51 GMT

ಚೆನ್ನೈ, ಎ.9: ವೇಗಿ ದೀಪಕ್ ಚಹಾರ್, ಸ್ಪಿನ್ನರ್‌ಗಳಾದ ಹರ್ಭಜನ್ ಸಿಂಗ್ ಹಾಗೂ ಇಮ್ರಾನ್ ತಾಹಿರ್ ಬೌಲಿಂಗ್ ದಾಳಿ ಮತ್ತು ದಾಂಡಿಗರ ಸಮಯೋಚಿತ ಆಟದ ಬಲದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಕೋಲ್ಕತಾ ನೈಟ್‌ರೈಡರ್ಸ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಮಂಗಳವಾರ ಇಲ್ಲಿನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ 23ನೇ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೋಲ್ಕತಾ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿತ್ತು.

109 ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ 17.2 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿ ಜಯದ ನಗೆ ಬೀರಿತು. ತಂಡದ ಪರ ಶೇನ್ ವಾಟ್ಸನ್ (17, 9 ಎಸೆತ, 2 ಬೌಂಡರಿ, 1 ಸಿಕ್ಸರ್) ಹಾಗೂ ಎಫ್ ಡು ಪ್ಲೆಸಿಸ್ (ಅಜೇಯ 43, 45 ಎಸೆತ, 3 ಬೌಂಡರಿ)ಮೊದಲ ವಿಕೆಟ್ ಜೊತೆಯಾಟದಲ್ಲಿ 18 ರನ್ ಸೇರಿಸಿದರು. ವಾಟ್ಸನ್ ಮೊದಲನೆಯವರಾಗಿ ನರೈನ್‌ಗೆ ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಸುರೇಶ್ ರೈನಾ (14, 13 ಎಸೆತ, 1 ಬೌಂಡರಿ, 1 ಸಿಕ್ಸರ್) ಹೆಚ್ಚು ಅಬ್ಬರಿಸಲಿಲ್ಲ. ಅವರೂ ನರೈನ್ ಎಸೆತದಲ್ಲಿ ಔಟಾದರು. ಅಂಬಟಿ ರಾಯುಡು (21, 31 ಎಸೆತ, 2 ಬೌಂಡರಿ) ಒಂದಷ್ಟು ಹೊತ್ತು ಕೋಲ್ಕತಾ ಬೌಲರ್‌ಗಳಿಗೆ ಸವಾಲಾದರು. ಕೊನೆಯಲ್ಲಿ ಕೇದಾರ್ ಜಾಧವ್ (ಅಜೇಯ 8) ಹಾಗೂ ಪ್ಲೆಸಿಸ್ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು.

ಕೋಲ್ಕತಾ ಪರ ನರೈನ್ ಎರಡು ವಿಕೆಟ್ ಪಡೆದರು.

ಇದಕ್ಕೂ ಮೊದಲು ಟಾಸ್ ಗೆದ್ದ ಚೆನ್ನೈ ಬೌಲಿಂಗ್ ಆಯ್ದುಕೊಂಡಿತು. ಕೋಲ್ಕತಾ ಪರ ಆರಂಭಿಕ ದಾಂಡಿಗರಾಗಿ ಕಣಕ್ಕಿಳಿದ ಕ್ರಿಸ್ ಲಿನ್ (0) ಹಾಗೂ ಸುನೀಲ್ ನರೈನ್(6) ತಂಡದ ಮೊತ್ತ ಕೇವಲ 6 ರನ್ ಆಗುವಷ್ಟರಲ್ಲಿ ಬೇರ್ಪಟ್ಟರು. ದೀಪಕ್ ಚಹಾರ್ ಅವರು ಲಿನ್‌ರನ್ನು ಎಲ್‌ಬಿಡಬ್ಲು ಬಲೆಗೆ ಕೆಡವಿದರು. ಅದಾದ ಬಳಿಕ ತಂಡದ ಮೊತ್ತಕ್ಕೆ 2 ರನ್ ಸೇರುವಷ್ಟರಲ್ಲಿ ನರೈನ್, ಹರ್ಭಜನ್‌ಗೆ ವಿಕೆಟ್ ಒಪ್ಪಿಸಿದರು. ಹೀಗೆ ಕೋಲ್ಕತಾ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಆರಂಭಿಕರಿಬ್ಬರ ವಿಕೆಟ್ ಪತನದ ಬಳಿಕ ಒಂದಾದ ರಾಬಿನ್ ಉತ್ತಪ್ಪ (11, 9 ಎಸೆತ, 2 ಬೌಂಡರಿ) ಹಾಗೂ ನಿತೀಶ್ ರಾಣಾ (0) ಹೆಚ್ಚೇನೂ ರನ್ ಗಳಿಸಲಾಗಲಿಲ್ಲ. ಆ ಬಳಿಕ ನಾಯಕ ಹಾಗೂ ವಿಕೆಟ್ ಕೀಪರ್ ದಾಂಡಿಗ ದಿನೇಶ್ ಕಾರ್ತಿಕ್ (19, 21 ಎಸೆತ, 3 ಬೌಂಡರಿ) ತಮ್ಮ ತಂಡಕ್ಕೆ ಬಲ ತುಂಬುವ ಕಾರ್ಯಕ್ಕಿಳಿದರು. ಅವರಿಗೆ ಶುಭ್‌ಮನ್ ಗಿಲ್ (9) ಉತ್ತಮ ಸಾಥ್ ನೀಡಲಿಲ್ಲ. ಗಿಲ್ ಅವರು ತಾಹಿರ್ ಎಸೆತದಲ್ಲಿ ಧೋನಿ ಮಾಡಿದ ಸ್ಟಂಪಿಂಗ್‌ಗೆ ಬಲಿಯಾದರು. ಉತ್ತಮ ಆಟವಾಡುತ್ತಿದ್ದ ಕಾರ್ತಿಕ್ ಕೂಡ ತಾಹಿರ್ ಪ್ರಹಾರಕ್ಕೆ ವಿಕೆಟ್ ಕೈಚೆಲ್ಲಿದರು.

ಪಿಯೂಷ್ ಚಾವ್ಲಾ (8), ಕುಲದೀಪ ಯಾದವ್ (0) ಹಾಗೂ ಪ್ರಸಿದ್ಧ ಕೃಷ್ಣ (0) ಬ್ಯಾಟ್‌ಗಳು ಸದ್ದು ಮಾಡಲಿಲ್ಲ. ಸ್ಫೋಟಕ ಹೊಡೆತಗಳ ಆಟಗಾರ ಆ್ಯಂಡ್ರೆ ರಸೆಲ್ (ಅಜೇಯ 50, 44 ಎಸೆತ, 5 ಬೌಂಡರಿ, 3 ಸಿಕ್ಸರ್ ) ಕೋಲ್ಕತಾ ತಂಡ ಗೌರವಾರ್ಹ ಮೊತ್ತ ಗಳಿಸುವಲ್ಲಿ ಶ್ರಮಿಸಿದರು.

ಚೆನ್ನೈ ಪರ ಚಹಾರ್ (20ಕ್ಕೆ 3 ), ಹರ್ಭಜನ್ (15ಕ್ಕೆ 2 ) ಹಾಗೂ ತಾಹಿರ್ (21ಕ್ಕೆ 2) ಪರಿಣಾಮಕಾರಿ ಬೌಲಿಂಗ್ ದಾಳಿ ಸಂಘಟಿಸಿದರು. ರವೀಂದ್ರ ಜಡೇಜ (17ಕ್ಕೆ 1)ಉಪಯುಕ್ತ ಕಾಣಿಕೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News