ಹುತಾತ್ಮ ಯೋಧನ ಈ ಪುಟ್ಟ ಮಗುವಿಗಾಗಿ ಪ್ರಾರ್ಥಿಸಿ..

Update: 2019-04-10 03:47 GMT
ಹುತಾತ್ಮ ಯೋಧ ರತನ್ ಠಾಕೂರ್ ಕುಟುಂಬ

ರಾಂಚಿ, ಎ.10: ಪುಲ್ವಾಮಾ ಉಗ್ರರ ದಾಳಿಯಲ್ಲಿ ಹುತಾತ್ಮರಾದ ಯೋಧನ ನವಜಾತ ಶಿಶು ಜೀವನ್ಮರಣ ಸ್ಥಿತಿಯಲ್ಲಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಈ ಮಗುವಿನ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಮೃತ ಯೋಧನ ಪತ್ನಿ ಮೊರೆ ಇಟ್ಟಿದ್ದಾರೆ.

ಭಾಗಲ್ಪುರ ಸಮೀಪದ ರತ್ನಪುರ ಗ್ರಾಮದ ರತನ್ ಠಾಕೂರ್ ಉಗ್ರರ ದಾಳಿಗೆ ಬಲಿಯಾದ ಎರಡು ತಿಂಗಳ ಬಳಿಕ ಅಂದರೆ ಎಪ್ರಿಲ್ 6ರಂದು ಯೋಧನ ಪತ್ನಿ ರಾಜನಂದಿನಿ ದೇವಿ ಈ ಮಗುವಿಗೆ ಜನ್ಮ ನೀಡಿದ್ದಾರೆ. ಇದು ಅವಧಿಪೂರ್ವ ಪ್ರಸವವಾಗಿರುವುದರಿಂದ ಆರೋಗ್ಯ ಸಮಸ್ಯೆ ಉಲ್ಬಣಿಸಿ ಮಗುವನ್ನು ಭಾಗಲ್ಪುರ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಲ್ಲಿಂದ ರಾಂಚಿ ಆಸ್ಪತ್ರೆಗೆ ಒಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ಇದೀಗ ರಾಣಿ ಮಕ್ಕಳ ಆಸ್ಪತ್ರೆಯಲ್ಲಿ ಮೂರು ದಿನದ ಮಗುವಿಗೆ ಚಿಕಿತ್ಸೆ ನೀಡಲಾಗುತ್ತಿದೆ.

ಎಂಟನೇ ತಿಂಗಳಲ್ಲಿ ಹುಟ್ಟಿದ ಈ ಮಗುವಿಗೆ ಇಂಟ್ರಾವೆಂಟ್ರಿಕ್ಯುಲರ್ ಹ್ಯಾಮರೇಜ್ (ಮೆದುಳಿನಲ್ಲಿ ದ್ರವ ತುಂಬಿರುವ ಜಾಗಕ್ಕೆ ರಕ್ತ ಸೋರಿಕೆ) ಸಮಸ್ಯೆ ಇದೆ. ವೈದ್ಯಕೀಯ ವರದಿಯ ಪ್ರಕಾರ ಹುಟ್ಟಿದ ಬಳಿಕ ಮಗು ಅತ್ತಿಲ್ಲ ಎಂದು ಮಕ್ಕಳ ತಜ್ಞ ಡಾ.ರಾಕೇಶ್ ಕುಮಾರ್ ಹೇಳಿದ್ದಾರೆ. "ಮಗು ಬದುಕಿ ಉಳಿಯುವ ಸಾಧ್ಯತೆ ಶೇಕಡ 50ರಷ್ಟು ಮಾತ್ರ ಇದೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಅತ್ಯುತ್ತಮ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಮಗುವಿಗೆ ಕೃತಕ ಉಸಿರಾಟ ಅಳವಡಿಸಲಾಗಿದೆ" ಎಂದು ವಿವರಿಸಿದ್ದಾರೆ. ಯೋಧನ ಗೌರವಾರ್ಥವಾಗಿ ಎಲ್ಲ ಶುಲ್ಕಗಳಲ್ಲಿ ಶೇಕಡ 50ರಷ್ಟು ರಿಯಾಯ್ತಿಯನ್ನು ಆಸ್ಪತ್ರೆ ಘೋಷಿಸಿದೆ.

"ಮತ್ತೊಬ್ಬ ಮಗನನ್ನು ಕಳೆದುಕೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ. ತಂದೆ ಮೃತಪಟ್ಟ ಬಳಿಕ ಹುಟ್ಟಿದ ಮಗು ಇದು. ತಂದೆಯ ಹೆಜ್ಜೆಗುರುತನ್ನು ಈ ಮಗು ಅನುಸರಿಸುತ್ತದೆ ಎಂಬ ಖಾತರಿ ನೀಡಬಲ್ಲೆ. ದಯವಿಟ್ಟು ಉಳಿಸಿಕೊಡಿ" ಎಂದು ರಾಜನಂದಿನಿ ಮತ್ತು ಹುತಾತ್ಮ ಯೋಧನ ತಂದೆ ರಾಮನಿರಂಜನ ಠಾಕೂರ್ ವೈದ್ಯರಿಗೆ ಮೊರೆ ಇಡುತ್ತಿದ್ದಾರೆ.

"ನಾನು ಆಸೆ ಕೈಬಿಟ್ಟಿಲ್ಲ. ನನ್ನ ಪತಿ ಹುತಾತ್ಮರಾದಾಗ ಇಡೀ ದೇಶ ಒಗ್ಗೂಡಿ ಅವರಿಗಾಗಿ ಪ್ರಾರ್ಥಿಸಿತ್ತು. ಇದೀಗ ಹುತಾತ್ಮನ ಮಗನಿಗಾಗಿ ಪ್ರಾರ್ಥಿಸುವಂತೆ ಕೋರುತ್ತೇನೆ" ಎಂದು ರಾಜನಂದಿನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News