ರಾಹುಲ್ ಗಾಂಧಿ ಅಮೇಠಿಯಿಂದ ನಾಮಪತ್ರ

Update: 2019-04-10 17:50 GMT

ಅಮೇಠಿ,ಎ.10: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ಅಮೇಠಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದರು. ತನ್ನ ತಾಯಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಸಹೋದರಿ ಪ್ರಿಯಾಂಕಾ ವಾಧ್ರಾ ಅವರಜೊತೆ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ರಾಹುಲ್ ಆಗಮಿಸಿ, ತನ್ನ ನಾಮಪತ್ರ ಸಲ್ಲಿಸಿದರು.
 
ಈ ಸಂದರ್ಭದಲ್ಲಿ ಪ್ರಿಯಾಂಕಾ ಅವರ ಪತಿ ರಾಬರ್ಟ್ ವಾಧ್ರಾ ಹಾಗೂ ಅವರ ಇಬ್ಬರು ಮಕ್ಕಳು ಕೂಡಾ ರಾಹುಲ್ ಜೊತೆಗಿದ್ದರು. ನಾಮಪತ್ರ ಸಲ್ಲಿಕೆಗೆ ಮುನ್ನ ನಡೆದ ಬೃಹತ್ ರೋಡ್‌ಶೋದಲ್ಲಿ ರಾಹುಲ್ ಹಾಗೂ ಪ್ರಿಯಾಂಕಾ ಪಾಲ್ಗೊಂಡಿದ್ದರು.ರೋಡ್‌ಶೋದಲ್ಲಿ ಪಾಲ್ಗೊಳ್ಳದ ಸೋನಿಯಾ ಅವರು ನಾಮಪತ್ರ ಸಲ್ಲಿಕೆಯ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದರು. ಸೋನಿಯಾ ಅವರು ಗುರುವಾರದಂದು ರಾಯ್‌ಬರೇಲಿ ಕ್ಷೇತ್ರದಿಂದ ತನ್ನ ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ರಾಹುಲ್, ರಫೇಲ್ ಹಗರಣ ಹಾಗೂ ನಗದು ಅಮಾನ್ಯತೆ ವಿಷಯವಾಗಿ ಬಹಿರಂಗವಾಗಿ ಚರ್ಚೆಗೆ ಬರುವಂತೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಸವಾಲೊಡ್ಡಿದರು.

  ರಫೇಲ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ಇಂದು ಬೆಳಗ್ಗೆ ನೀಡಿದ ಆದೇಶದಿಂದ ಉತ್ತೇಜಿತರಾಗಿರುವ ರಾಹುಲ್ ರಫೇಲ್, ಭ್ರಷ್ಟಾಚಾರ ಹಾಗೂ ನೋಟು ನಿಷೇಧದ ಬಗ್ಗೆ ಚರ್ಚೆಯಾಗಲಿ ಎಂದು ಆಗ್ರಹಿಸಿದರು.
 ರಫೇಲ್ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ ತೀರ್ಪಿನ ಮರುಪರಿಶೀಲನೆಯನ್ನು ಕೋರಿ ಅರ್ಜಿ ಸಲ್ಲಿಸಿದ ವೇಳೆ ಒದಗಿಸಲಾದ ದಾಖಲೆಗಳು ಅಕ್ರಮವಾಗಿ ಸೋರಿಕೆಯಾದವು ಆಗಿದ್ದು, ಅವುಗಳನ್ನು ಪರಿಶೀಲಿಸಬಾರದೆಂಬ ಕೇಂದ್ರಸರಕಾರದ ವಾದವನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು. ಚುನಾವಣಾ ಹೊಸ್ತಿಲಲ್ಲಿರುವ ಎನ್‌ಡಿಎ ಸರಕಾರಕ್ಕೆ ಈ ತೀರ್ಪು ತೀವ್ರ ಹಿನ್ನಡೆಯನ್ನುಂಟು ಮಾಡಿದೆ.
 ಅಮೇಠಿ ಲೋಕಸಭಾ ಕ್ಷೇತ್ರವನ್ನು ಮೂರು ಸಲ ಪ್ರತಿನಿಧಿಸಿರುವ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವೆ ಸ್ಮತಿ ಇರಾನಿ ಸ್ಪರ್ಧಿಸುತ್ತಿದ್ದಾರೆ. ಎಸ್-ಬಿಎಸ್‌ಪಿ- ಆರ್‌ಎಲ್‌ಡಿ ಮೈತ್ರಿಕೂಟವು ಅಮೇಠಿ ಕ್ಷೇತ್ರದಲ್ಲಿ ತನ್ನ ಅಭ್ಯರ್ಥಿಯನ್ನುಕಣಕ್ಕಿಳಿಸದೆ ಇರುವುದರಿಂದ, ಇಲ್ಲಿ ವಸ್ತುಶಃ ರಾಹುಲ್ ಹಾಗೂ ಸ್ಮೃತಿ ಇರಾನಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ.
 
ಈ ಸಲದ ಲೋಕಸಭಾ ಚುನಾವಣೆಯಲ್ಲಿ ರಾಹುಲ್ ಅವರು ಅಮೇಠಿ ಜೊತೆ ಕೇರಳದ ವಯನಾಡ್ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದು, ಅಲ್ಲಿ ಅವರು ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸಿದ್ದರು. ಬಿಜೆಪಿಯ ಸ್ಮೃತಿ ಇರಾನಿ ಅವರು ಗುರುವಾರ ನಾಮಪತ್ರಸಲ್ಲಿಸುವ ನಿರೀಕ್ಷೆಯಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಸ್ಮೃತಿ ಅವರನ್ನು ರಾಹುಲ್, ಒಂದು ಲಕ್ಷ ಮತಗಳ ಅಂತರದಿಂದ ಪರಾಭವಗೊಳಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News