ಬರ ನಿರ್ವಹಣೆಗೆ ನೆರವು: ಕೇಂದ್ರ ಸರಕಾರದಿಂದ ತಾರತಮ್ಯ; ಕೃಷ್ಣಭೈರೇಗೌಡ

Update: 2019-04-10 12:43 GMT

ಬೆಂಗಳೂರು, ಎ.10: ರಾಜ್ಯದ ಬರ ನಿರ್ವಹಣೆಗೆ ಸಹಾಯ ಕೇಳಿದಾಗ ಕೇಂದ್ರ ಸರಕಾರ ಸೂಕ್ತ ನೆರವು ನೀಡಲಿಲ್ಲ. ಮಹಾರಾಷ್ಟ್ರ ರಾಜ್ಯಕ್ಕೆ 4 ಸಾವಿರ ಕೋಟಿ ರೂ.ನೆರವು ನೀಡಿದ ಕೇಂದ್ರ ಬಿಜೆಪಿ ಸರಕಾರ, ನಮ್ಮ ರಾಜ್ಯಕ್ಕೆ ಕೊಟ್ಟಿದ್ದು ಕೇವಲ 940 ಕೋಟಿ ರೂ.ಮಾತ್ರ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ನಗರದ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಗೆದ್ದಲಹಳ್ಳಿ ಪಾರ್ಕ್‌ನಲ್ಲಿ ವಾಯು ವಿಹಾರಕ್ಕೆ ಬಂದಿದ್ದ ಜನರ ಬಳಿ ಮತಯಾಚನೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ನಮ್ಮ ರಾಜ್ಯದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಸಂಸದರು ಆಯ್ಕೆ ಆಗಿದ್ದಾರೆ. ಆದರೆ, ನಮ್ಮ ರಾಜ್ಯದ ಪರ ಅವರು ಕೇಂದ್ರದಲ್ಲಿ ಧ್ವನಿ ಎತ್ತುತ್ತಿಲ್ಲ. ಮಾತನಾಡುವುದಕ್ಕೂ ಭಯ ಪಡುತ್ತಾರೆ. ಹೀಗಾಗಿ ಬೆಂಗಳೂರು ಮತ್ತು ರಾಜ್ಯದ ಪರ ಕೆಲಸ ಮಾಡಲು ಬದ್ಧತೆ ಹೊಂದಿರುವ ಅಭ್ಯರ್ಥಿಗೆ ನಿಮ್ಮ ಮತ ನೀಡಿ ಎಂದು ಅವರು ಮನವಿ ಮಾಡಿದರು.

ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ರಫ್ತು ಒಂದರಿಂದಲೇ ದೇಶಕ್ಕೆ 80 ಸಾವಿರ ಕೋಟಿ ರೂ.ಆದಾಯ ಬರುತ್ತಿದೆ. ಆದರೆ, ಕೇಂದ್ರ ಸರಕಾರ ಬೆಂಗಳೂರು ವಿಷಯದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಕೃಷ್ಣಭೈರೇಗೌಡ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿನ ಸಂಚಾರ ದಟ್ಟಣೆ ಸಮಸ್ಯೆಯನ್ನು ನಿವಾರಿಸಲು ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ ಸಹಕಾರ ನೀಡಲು ಕೇಂದ್ರ ಸರಕಾರ ಮೀನಾಮೇಷ ಎಣಿಸುತ್ತಿದೆ. ಭೂ ಸ್ವಾಧೀನ ಪ್ರಕ್ರಿಯೆಗೆ ಅಗತ್ಯವಿರುವ ಹಣವನ್ನು ಕೊಟ್ಟಿಲ್ಲ. ರಸ್ತೆ ನಿರ್ಮಾಣ ಯೋಜನೆಗೂ ಹಣ ಬಿಡುಗಡೆ ಮಾಡಿಲ್ಲ ಎಂದು ಅವರು ಆರೋಪಿಸಿದರು. ಈ ಸಂದರ್ಭದಲ್ಲಿ ಹೆಬ್ಬಾಳ ಶಾಸಕ ಭೈರತಿ ಎಸ್.ಸುರೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News