ಮೊದಲ ತಡೆ ದಾಟಿದ ಸಿಂಧು, ಸೈನಾ

Update: 2019-04-11 04:02 GMT

ಸಿಂಗಾಪುರ, ಎ.10: ಭಾರತದ ತಾರಾ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಬುಧವಾರ ನಡೆದ ಸಿಂಗಾಪುರ ಓಪನ್‌ನ ತನ್ನ ಮೊದಲ ಸುತ್ತಿನ ಪಂದ್ಯದಲ್ಲಿ ಇಂಡೋನೇಶ್ಯದ ಲ್ಯಾನ್ನಿ ಅಲೆಸಾಂಡ್ರೊ ಮೈನಾಕಿ ವಿರುದ್ಧ ಜಯಿಸಿ ಎರಡನೇ ಸುತ್ತಿಗೆ ಲಗ್ಗೆಯಿಟ್ಟಿದ್ದಾರೆ.

ನಾಲ್ಕನೇ ಶ್ರೇಯಾಂಕದ ಹೈದರಾಬಾದ್ ಬೆಡಗಿ, ಕೇವಲ 27 ನಿಮಿಷಗಳ ಅವಧಿಯಲ್ಲಿ 21-9, 21-7 ನೇರ ಗೇಮ್‌ಗಳಿಂದ ಮಣಿಸಿದರು.

ರಿಯೊ ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಸಿಂಧು, ತಮ್ಮ ಮುಂದಿನ ಪಂದ್ಯದಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ಅವರನ್ನು ಎದುರಿಸಲಿದ್ದಾರೆ.

 ಆದಾಗ್ಯೂ ಪುರುಷರ ಡಬಲ್ಸ್ ಸ್ಪರ್ಧೆಯಲ್ಲಿ ಭಾರತದ ಆಟಗಾರರಿಗೆ ನಿರಾಸೆ ಕಾದಿತ್ತು. ಮನು ಅತ್ರಿ-ಬಿ. ಸುಮಿತ್‌ರೆಡ್ಡಿ ಜೋಡಿಯು ಅರ್ಹತಾ ಸುತ್ತಿನಿಂದ ಬಂದ ಜೋಡಿಯಾದ ಸಿಂಗಾಪುರದ ಡ್ಯಾನ್ನಿ ಬಾವಾ ಕ್ರಿಸಂತ- ಕೀನ್ ಹೀನ್ ಲೊಹ್ ಜೋಡಿಗೆ 13-21, 17-21 ಗೇಮ್‌ಗಳಿಂದ ಮಣಿಯಿತು. ಇನ್ನು ಮಿಶ್ರ ಡಬಲ್ಸ್‌ನಲ್ಲಿ ಸೌರಭ್ ಶರ್ಮಾ-ಅನೌಶ್ಕಾ ಪಾರಿಕ್ ಜೋಡಿಯು ತಮ್ಮ ಪ್ರಥಮ ಸುತ್ತಿನ ಪಂದ್ಯದಲ್ಲಿ ಸೋತು ಹೊರನಡೆಯಿತು. ಮೂರನೇ ಶ್ರೇಯಾಂಕದ ಸ್ಕಾಟ್ಲೆಂಡ್ ಡೆಚಾಪೊಲ್ ಪಾವ್‌ರಾನುಕ್ರೊ-ಸಾಪ್ಸಿರೀ ಟಾರ್‌ಟ್ಟನಾಚಿ ಜೋಡಿಯು ಭಾರತದ ಜೋಡಿಯನ್ನು ಬಗ್ಗುಬಡಿಯಿತು.

ಭಾರತದ ಮತ್ತೊಂದು ಮಿಶ್ರ ಡಬಲ್ಸ್ ಜೋಡಿಯಾದ ಪ್ರಣವ್ ಜೆರ್ರಿ ಚೋಪ್ರಾ ಹಾಗೂ ಎನ್.ಸಿಕ್ಕಿರೆಡ್ಡಿ ಎರಡನೇ ಸುತ್ತಿಗೆ ಪ್ರವೇಶ ಪಡೆದರು. ತಮ್ಮ ಮೊದಲ ಸುತ್ತಿನ ಪಂದ್ಯದಲ್ಲಿ ಅವರು, ಭಾರತದವರೇ ಆದ ಅರ್ಜುನ್ ಎಂ.ಆರ್- ಕೆ. ಮನೀಶಾರನ್ನು 21-18, 21-7ರಿಂದ ಸದೆಬಡಿದರು.

ಲಯ ಕಂಡುಕೊಂಡ ನೆಹ್ವಾಲ್

ಟೂರ್ನಿಯಲ್ಲಿ ಆರನೇ ಶ್ರೇಯಾಂಕ ಪಡೆದಿರುವ ಭಾರತದ ಇನ್ನೋರ್ವ ಖ್ಯಾತ ತಾರೆ ಸೈನಾ ನೆಹ್ವಾಲ್ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಬುಧವಾರ ಇಂಡೋನೇಶ್ಯದ ಯುಲಿಯಾ ಯೊಸೆಫಿನ್ ಸುಸಾಂತೊ ಅವರನ್ನು 21-16, 21-11ರಿಂದ ಮಣಿಸಿ ಎರಡನೇ ಸುತ್ತಿಗೆ ಪ್ರವೇಶಿಸಿದರು. ಆರಂಭದಲ್ಲಿ ಸುಸಾಂತೊರಿಂದ ಕಠಿಣ ಪೈಪೋಟಿಯನ್ನು ಸೈನಾ ಎದುರಿಸಬೇಕಾಯಿತು. ದೀರ್ಘ ಸಮಯದ ರ್ಯಾಲಿಗಳು ಉಭಯ ಆಟಗಾರ್ತಿಯರನ್ನು ಸುಸ್ತಾಗಿಸಿದವು. ಪ್ರಥಮ ಗೇಮ್‌ನ ವಿರಾಮದ ಅವಧಿಯಲ್ಲಿ ಸೈನಾ 11-9 ಮುನ್ನಡೆ ಸಾಧಿಸಿದ್ದರೂ ಎದುರಾಳಿ ಆಟಗಾರ್ತಿ ತಿರುಗೇಟು ನೀಡಿ 15-15ರ ಸಮಬಲ ಸಾಧಿಸಿದರು. ಆದರೆ ಸೈನಾ ಆಲ್‌ರೌಂಡ್ ಆಟದ ಎದುರು ವೇಗವನ್ನು ಕಾಯ್ದುಕೊಳ್ಳಲು ವಿಫಲವಾದ ಸುಸಾಂತೊ ಗೇಮ್‌ನ್ನು ಕಳೆದುಕೊಳ್ಳಬೇಕಾಯಿತು.

 ಆದರೆ ಎರಡನೇ ಗೇಮ್‌ನಲ್ಲಿ ಎದುರಾಳಿಯ ಆಟವನ್ನು ಗ್ರಹಿಸಿಕೊಂಡಂತೆ ಆಡಿದ ಸೈನಾ ಸಂಪೂರ್ಣ ಪ್ರಾಬಲ್ಯ ಮೆರೆದು 21-11ರಿಂದ ಗೇಮ್ ಗೆದ್ದರು. ಸೈನಾ ತಮ್ಮ ಎರಡನೇ ಸುತ್ತಿನ ಪಂದ್ಯದಲ್ಲಿ ಥಾಯ್ಲೆಂಡ್‌ನ ಪಾರ್ನ್‌ಪವೀ ಚೊಚುವಾಂಗ್ ಅಥವಾ ಭಾರತದವರೇ ಆದ ಮುಗ್ಧಾ ಅಗ್ರೇ ಅವರ ಸವಾಲಿಗೆ ಸಜ್ಜಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News