ಗಂಗುಲಿಗೆ ತನಿಖಾಧಿಕಾರಿ ಸಮನ್ಸ್ ನೀಡಬಹುದು

Update: 2019-04-11 04:17 GMT

ಹೊಸದಿಲ್ಲಿ, ಎ.10: ಪಶ್ಚಿಮ ಬಂಗಾಳ ಕ್ರಿಕೆಟ್ ಅಸೋಸಿಯೇಷನ್‌ನ ಅಧ್ಯಕ್ಷ ಸೌರವ್ ಗಂಗುಲಿ ವಿರುದ್ಧ ಹಿತಾಸಕ್ತಿ ಸಂಘರ್ಷದ ಆರೋಪವಿದ್ದರೂ ಅವರು ಐಪಿಎಲ್ ತಂಡವಾದ ದಿಲ್ಲಿ ಕ್ಯಾಪಿಟಲ್ಸ್‌ನ ಡಗೌಟ್‌ನಲ್ಲಿ ಕುಳಿತುಕೊಳ್ಳುವುದಕ್ಕೆ ಆಕ್ಷೇಪವಿಲ್ಲ. ಆದರೆ ಅಗತ್ಯಬಿದ್ದರೆ ಅವರು ಬಿಸಿಸಿಐ ತನಿಖಾಧಿಕಾರಿಯ ಎದುರು ಸ್ವತಃ ಹಾಜರಾಗಿ ಹೇಳಿಕೆ ನೀಡಬೇಕು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಐಪಿಎಲ್‌ನಲ್ಲಿ ದಿಲ್ಲಿ ಕ್ಯಾಪಿಟಲ್ಸ್ ತಂಡದ ಸಲಹೆಗಾರನಾಗಿ ಗಂಗುಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹಿತಾಸಕ್ತಿ ಸಂಘರ್ಷದ ಪ್ರಕರಣದಲ್ಲಿ ಅಂತಿಮ ನಿರ್ಧಾರಕ್ಕೆ ಬರುವ ಮೊದಲು ನಿವೃತ್ತ ನ್ಯಾಯಮೂರ್ತಿ ಡಿಕೆ ಜೈನ್ ಅವರು ಗಂಗುಲಿಯನ್ನು ಕರೆಸಿ ಅವರ ಹೇಳಿಕೆಯನ್ನು ಆಲಿಸುವ ಸಾಧ್ಯತೆಯಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗುಲಿ ಎರಡು ಹುದ್ದೆಗಳನ್ನು ನಿರ್ವಹಿಸು ತ್ತಿರುವುದು ಹಿತಾಸಕ್ತಿಯ ಸಂಘರ್ಷಕ್ಕೆ ಎಡೆ ಮಾಡಿಕೊಡುತ್ತದೆ ಎಂದು ಕೋಲ್ಕತಾದ ಮೂವರು ವ್ಯಕ್ತಿಗಳು ಬಿಸಿಸಿಐಗೆ ದೂರು ಸಲ್ಲಿಸಿದ್ದರು. ಈ ಕುರಿತು ತನಗೆ ನೀಡಲಾಗಿದ್ದ ನೋಟಿಸ್‌ಗೆ ಉತ್ತರಿಸಿದ್ದ ಗಂಗುಲಿ, ತಮ್ಮ ಮೇಲಿನ ಆರೋಪವನ್ನು ನಿರಾಕರಿಸಿದ್ದರು. ಲಿಖಿತ ಹೇಳಿಕೆ ನೀಡಿದ ಬಳಿಕವೂ ವೈಯಕ್ತಿಕವಾಗಿ ಹಾಜರಾಗಬೇಕೇ ಎಂಬ ಪ್ರಶ್ನೆಗೆ ಉತ್ತರಿಸಿರುವ ಬಿಸಿಸಿಐ ಅಧಿಕಾರಿ, ನಿಯಮಾನುಸಾರ ಅವರು ಹಾಜರಿರಬೇಕು. ಹಾರ್ದಿಕ್ ಪಾಂಡ್ಯ, ರಾಹುಲ್ ಪ್ರಕರಣದಲ್ಲೂ ಅವರು ಲಿಖಿತ ಹೇಳಿಕೆ ನೀಡಿದರೂ ವಿಚಾರಣೆಗೆ ಹಾಜರಿದ್ದರು. ಗಂಗುಲಿಯ ಪ್ರಕರಣದಲ್ಲೂ ಅಗತ್ಯಬಿದ್ದರೆ ಅವರು ವಿಚಾರಣೆಗೆ ವೈಯಕ್ತಿಕವಾಗಿ ಹಾಜರಾಗಬೇಕು ಎಂದು ಹೇಳಿದ್ದಾರೆ. ತನಿಖಾಧಿಕಾರಿ ಗಂಗುಲಿಗೆ ಸಮನ್ಸ್ ನೀಡುತ್ತಾರೆ ಎಂಬುದು ತನ್ನ ಮಾತಿನ ಅರ್ಥವಲ್ಲ. ಆದರೆ ಹಾಗೆ ಮಾಡುವ ಆಯ್ಕೆಯೂ ಅವರ ಮುಂದಿದೆ ಎಂದು ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News