ಮಹಾರಾಷ್ಟ್ರ ಸಚಿವರ ರ‍್ಯಾಲಿಯಲ್ಲಿ ಬಿಜೆಪಿ ಕಾರ್ಯಕರ್ತರ ಹೊಡೆದಾಟ

Update: 2019-04-11 07:26 GMT

ಮುಂಬೈ, ಎ. 11: ಬಿಜೆಪಿ ರ‍್ಯಾಲಿಯಲ್ಲಿ ಪಕ್ಷದ ಎರಡು ಬಣಗಳ ನಡುವೆ ರಾಜ್ಯದ ಸಚಿವರ ಎದುರಲ್ಲೇ ಸಂಘರ್ಷ ನಡೆದ ಘಟನೆ ಜಲಗಾಂವ್‌ನಿಂದ ವರದಿಯಾಗಿದೆ.

ಪಕ್ಷ ತನ್ನ ಲೋಕಸಭಾ ಅಭ್ಯರ್ಥಿಯನ್ನು ಬದಲಾಯಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತರ ಗುಂಪುಗಳ ನಡುವೆ ಆರಂಭವಾದ ವಾಗ್ವಾದ ಸಂಘರ್ಷಕ್ಕೆ ತಿರುಗಿತು.

ಬಿಜೆಪಿ ಅಭ್ಯರ್ಥಿ ಉಮೇಶ್ ಪಾಟೀಲ್ ಅವರು ಉತ್ತರ ಮಹಾರಾಷ್ಟ್ರದ ಜಲಗಾಂವ್ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದು, ಅವರ ಪ್ರಚಾರಾರ್ಥ ರ‍್ಯಾಲಿ ನಡೆದಿತ್ತು. ಈ ಕ್ಷೇತ್ರದಿಂದ ಬಿಜೆಪಿ ಮೊದಲು ಸ್ಮಿತಾ ವಾಘ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿತ್ತು. ಆದರೆ ಬಳಿಕ ಪಾಟೀಲ್ ಅವರ ಹೆಸರು ಪ್ರಕಟಿಸಿತು. ಮಹಾರಾಷ್ಟ್ರದ ಸಚಿವ ಗಿರೀಶ್ ಮಹಾಜನ್, ಹಲವು ಮಂದಿ ಬಿಜೆಪಿ ಮುಖಂಡರು, ಸ್ಮಿತಾ ವಾಘ್, ಅವರ ಪತಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಉದಯ್ ವಾಘ್, ಬಿ.ಎಸ್.ಪಾಟೀಲ್ ಅವರ ಸಮ್ಮುಖದಲ್ಲೇ ಹಿಂಸಾಚಾರ ನಡೆಯಿತು.

ಮಾಜಿ ಶಾಸಕ ಬಿ.ಎಸ್.ಪಾಟೀಲ್ ಮತ್ತು ಹಾಲಿ ಸಂಸದ ಎ.ಟಿ.ಪಾಟೀಲ್ ಅವರು, ವಾಘ್ ವಿರುದ್ಧ ಒಗ್ಗೂಡಿ ಅವರು ಟಿಕೆಟ್ ಪಡೆಯದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ ಎನ್ನುವುದು ಕಾರ್ಯಕರ್ತರ ವಾದ. ಬುಧವಾರ ನಡೆದ ರ್ಯಾಲಿಯಲ್ಲಿ ಉದಯ್ ವಾಘ್ ಮತ್ತು ಅವರ ಬೆಂಬಲಿಗರು, ತಮ್ಮ ತಾಳ್ಮೆ ಕಳೆದುಕೊಂಡು ಬಿ.ಎಸ್.ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಹಾಜನ್ ಮತ್ತು ಇತರ ಮುಖಂಡರು ಮಧ್ಯಪ್ರವೇಶಿಸಿದರೂ ಪರಿಸ್ಥಿತಿ ಬಿಗಡಾಯಿಸಿ ಕಾರ್ಯಕರ್ತರು ಪರಸ್ಪರ ಹೊಡೆದಾಡಿಕೊಂಡರು. ಈ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವಿರೋಧ ಪಕ್ಷಗಳು ಘಟನೆಯನ್ನು ಅಣಕಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News