ಆಂಧ್ರಪ್ರದೇಶದ ವಿಧಾನಸಭೆ, ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ: ಅಲ್ಲಲ್ಲಿ ಕೈಕೊಟ್ಟ ಇವಿಎಂ

Update: 2019-04-11 06:24 GMT
ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ ಚಲಾಯಿಸಿದರು.

  ಅಮರಾವತಿ, ಎ.11: ಆಂಧ್ರಪ್ರದೇಶದ 175 ವಿಧಾನಸಭೆ ಹಾಗೂ 25 ಲೋಕಸಭಾ ಕ್ಷೇತ್ರಗಳಲ್ಲಿ ಗುರುವಾರ ಏಕಕಾಲದಲ್ಲಿ ಚುನಾವಣೆ ಆರಂಭವಾಗಿದ್ದು, ಮತದಾರರು ಎರಡು ಮತ ಚಲಾಯಿಸಬೇಕಾಗಿದೆ. ರಾಜ್ಯದಲ್ಲಿ 50ಕ್ಕೂ ಅಧಿಕ ಇವಿಎಂ ಯಂತ್ರಗಳಲ್ಲಿ ದೋಷ ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. 

 ಮತಯಂತ್ರ ಕೈಕೊಟ್ಟಿರುವ ಕಾರಣ ಮತದಾರರು ಉದ್ದ ಸರದಿ ಸಾಲಿನಲ್ಲಿ ನಿಂತು ಪರದಾಡುತ್ತಿದ್ದಾರೆ. ಓರ್ವ ಮಹಿಳೆ ಬಿಸಿಲಿನ ಝಳಕ್ಕೆ ತಲೆ ಸುತ್ತುಬಂದು ಬಿದ್ದಿರುವ ಘಟನೆಯೂ ವರದಿಯಾಗಿದೆ. ರಾಜ್ಯದ ಹಲವು ಕಡೆ ಇವಿಎಂ ಯಂತ್ರಗಳು ಕೆಲಸ ಮಾಡದೇ ಇರುವುದಕ್ಕೆ ಅಸಮಾಧಾನಗೊಂಡಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಚುನಾವಣಾ ಆಯೋಗಕ್ಕೆ ದೂರು ನೀಡಿ ಮರು ಮತದಾನಕ್ಕೆ ಆಗ್ರಹಿಸಿದ್ದಾರೆ.

‘‘ರಾಜ್ಯದೆಲ್ಲೆಡೆ 50ಕ್ಕೂ ಅಧಿಕ ಇವಿಎಂ ಯಂತ್ರಗಳಲ್ಲಿ ದೋಷ ಕಾಣಿಸಿಕೊಂಡಿರುವ ಮಾಹಿತಿ ಲಭ್ಯವಾಗಿದೆ. ತಾಂತ್ರಿಕ ತಂಡ ಆದಷ್ಟು ಬೇಗನೆ ಯಂತ್ರಗಳನ್ನು ದುರಸ್ತಿ ಮಾಡಿ ಮತದಾನ ಸುಲಲಿತವಾಗಿ ನಡೆಯಲು ಅನುವು ಮಾಡಿಕೊಡಲಿದೆ’’ ಎಂದು ಆಂಧ್ರಪ್ರದೇಶ ಮುಖ್ಯ ಚುನಾವಣಾ ಅಧಿಕಾರಿ ಗೋಪಾಲಕೃಷ್ಣ ದ್ವಿವೇದಿ ಹೇಳಿದ್ದಾರೆ.

ಚಂದ್ರಬಾಬು ನಾಯ್ಡು ನೇತೃತ್ವದ ತೆಲುಗುದೇಶಂ ಪಕ್ಷ ರಾಜ್ಯಕ್ಕೆ ಕೇಂದ್ರ ಸರಕಾರ ವಿಶೇಷ ಸ್ಥಾನಮಾನ ನೀಡಿಲ್ಲ ಎಂದು ಆರೋಪಿಸಿ ಕಳೆದ ವರ್ಷ ಎನ್‌ಡಿಎಯಿಂದ ಹೊರ ಬಂದಿದ್ದು, ಅವರು ಈ ಬಾರಿ ಅಧಿಕಾರ ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದ್ದಾರೆ. ಕಳೆದ ಚುನಾವಣೆಯಲ್ಲಿ 2ನೇ ಸ್ಥಾನ ಪಡೆದಿದ್ದ ಜಗಮೋಹನ್ ರೆಡ್ಡಿ ನೇತೃತ್ವದ ವೈಎಸ್‌ಆರ್ ಕಾಂಗ್ರೆಸ್ ಅಧಿಕಾರಕ್ಕೇರುವ ವಿಶ್ವಾಸದಲ್ಲಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತನ್ನ ಪರಿವಾರದ ಸಮೇತ ಮತ ಚಲಾಯಿಸಿದರು. ಜಗಮೋಹನ್ ರೆಡ್ಡಿ ಕಡಪದಲ್ಲಿ ಮತದಾನ ಮಾಡಿದರು.

ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ವಿಜಯವಾಡದ ಸಿದ್ದಾರ್ಥ್ ನಗರದಲ್ಲಿ ಮತ ಚಲಾಯಿಸಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News