ನನ್ನ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ: ಬಿಜೆಪಿ ಅಭ್ಯರ್ಥಿ ಸದಾನಂದಗೌಡ
ಬೆಂಗಳೂರು, ಎ. 11: ಐದು ವರ್ಷಗಳಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ತಾವು ಕೈಗೊಂಡ ಅಭಿವೃದ್ಧಿ ಕಾರ್ಯಗಳೆ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿವೆ ಎಂದು ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ವಿ. ಸದಾನಂದಗೌಡ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಗುರುವಾರ ಬೆಳಗ್ಗೆ ದಾಸರಹಳ್ಳಿಯ ಕ್ಷೇತ್ರದ ಸುಂಕದಕಟ್ಟೆಯ ಪೈಪ್‌ಲೈನ್ ರಸ್ತೆಯ ಹೊಯ್ಸಳನಗರದ ಗಣೇಶನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕ್ಷೇತ್ರಕ್ಕೆ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ.
ಯಶವಂತಪುರದಲ್ಲಿ ಕೇಂದ್ರೀಯ ವಿದ್ಯಾಲಯ, ಜಾಲಹಳ್ಳಿಯಲ್ಲಿ ಪಾಸ್ ಪೋರ್ಟ್ ಕಚೇರಿ ಸ್ಥಾಪನೆ ಮಾಡಲಾಗಿದೆ, ಬೆಂಗಳೂರಿಗೆ ನಾಲ್ಕು ಟಿಎಂಸಿ ಕಾವೇರಿ ನೀರು ಸಿಗುವಲ್ಲಿ ಕೇಂದ್ರ ಸರಕಾರ ಅಫಿಡೆವಿಟ್ ಸಲ್ಲಿಸುವಾಗ ಮುತುವರ್ಜಿ ವಹಿಸಿದ್ದೇನೆ ಎಂದು ವಿವರಿಸಿದರು.
ಕಾಂಗ್ರೆಸ್‌ನವರಿಗೆ ಸ್ವಂತ ವಿಚಾರಗಳಿಲ್ಲ. ಆದುದರಿಂದಲೇ ಟೀಕೆಯನ್ನೇ ಪ್ರಮುಖವಾಗಿ ಮಾಡುತ್ತಿದ್ದಾರೆ. ದೇಶ ಅಭಿವೃದ್ಧಿ ಹೊಂದುವುದು ಅವರಿಗೆ ಬೇಕಾಗಿಲ್ಲ ಎಂದು ವಾಗ್ದಾಳಿ ನಡೆಸಿದ ಅವರು, ಕಳೆದ ಬಾರಿ ದಾಸರಹಳ್ಳಿಯಲ್ಲಿ ಹೆಚ್ಚು ಮತಗಳನ್ನು ಕೊಟ್ಟಿದ್ದೀರಿ. ನಿಮ್ಮ ವಿಶ್ವಾಸಕ್ಕೆ ಚ್ಯುತಿ ಬರದಂತೆ ಸೇವೆ ಸಲ್ಲಿಸುತ್ತೇನೆ ಎಂದರು. ಮೋದಿ ನೇತೃತ್ವದ ಕೇಂದ್ರದ ಸರಕಾರವು ದೇಶದ ರಕ್ಷಣೆಗೆ ಬದ್ಧವಾಗಿದೆ. ಸಮರ್ಥ ನಾಯಕತ್ವ ಮತ್ತು ಸ್ಥಿರ ಸರಕಾರದಿಂದಾಗಿ ಭಾರತ ವಿಶ್ವದ ಪ್ರಮುಖ ಐದು ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಮೋದಿ ಅವರು ಪುನಃ ಪ್ರಧಾನಿಯಾದರೆ ವಿಶ್ವದಲ್ಲಿ ಭಾರತ ಮುಂಚೂಣಿಗೆ ಬರಲಿದೆ ಎಂದು ಹೇಳಿದರು.
ದೇಶದ ರಕ್ಷಣೆ ವಿಚಾರದಲ್ಲಿ ಮೋದಿ ರಾಜಿಯಾಗುವುದಿಲ್ಲ. ಭಯೋತ್ಪಾದನೆ ನಿಗ್ರಹಕ್ಕೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದಾರೆ. ಪುಲ್ವಾಮಾ ದಾಳಿ ನಂತರ ಪಾಕಿಸ್ತಾನದ ನೆಲೆಗೆ ನುಗ್ಗಿ ಉಗ್ರರ ತರಬೇತಿ ಶಿಬಿರಗಳನ್ನು ಧ್ವಂಸ ಮಾಡಲಾಗಿದೆ. ಆದರೆ ಹಿಂದಿನ ಕಾಂಗ್ರೆಸ್ ಸರಕಾರ ಭಯೋತ್ಫಾದನೆ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳಲಿಲ್ಲ ಎಂದು ಆರೋಪಿಸಿದರು.
ಕಾಂಗ್ರೆಸ್ ಆಡಳಿತವಿದ್ದಾಗ ಮುಂಬೈ, ಹೈದರಾಬಾದ್ ಸೇರಿದಂತೆ ದೇಶದ ಹಲವೆಡೆ ಉಗ್ರರು ಬಾಂಬ್ ಸ್ಫೋಟ ನಡೆಸಿದ್ದರು. ಆದರೆ, ಮೋದಿ ಪ್ರಧಾನಿಯಾದ ನಂತರ ಇಂತಹ ಕಹಿ ಘಟನೆಗಳಿಗೆ ಆಸ್ಪದ ನೀಡಿಲ್ಲ ಎಂದರು. ಮಾಜಿ ಶಾಸಕ ಮುನಿರಾಜು, ನಟ ಜಗ್ಗೇಶ್, ಡಿ.ಎಸ್.ವೀರಯ್ಯ, ಸುರೇಶ್, ಭಾಗ್ಯಮ್ಮ ಕೃಷ್ಣಯ್ಯ, ಆನಂದ್, ರಾಜು ಬ್ಯಾಡರಗಟ್ಟಿ, ಶಿವಲಿಂಗಯ್ಯ, ರಾಜಣ್ಣ ಹಾಜರಿದ್ದರು.