×
Ad

ಸಚಿವ ಸ್ಥಾನ ಕಳೆದುಕೊಳ್ಳುವ ಭೀತಿಯಿಂದ ಡಿವಿಎಸ್ ಕೇಂದ್ರದ ಮೇಲೆ ಒತ್ತಡ ಹೇರಲಿಲ್ಲ: ಕೃಷ್ಣಭೈರೇಗೌಡ

Update: 2019-04-11 17:42 IST

ಬೆಂಗಳೂರು, ಎ. 11: ಮಂತ್ರಿ ಸ್ಥಾನ ಕಳೆದುಕೊಳ್ಳುತ್ತೇನೆಂಬ ಭೀತಿ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಬರ, ಪೆರಿಫೆರಲ್ ರಸ್ತೆ ನಿರ್ಮಾಣ ಸೇರಿದಂತೆ ರಾಜ್ಯಕ್ಕೆ ಅನುದಾನ ಕೊಡಿಸಲು ಒತ್ತಡ ಹೇರದೆ ಸುಮ್ಮನೆ ಕುಳಿತಿದ್ದರು ಎಂದು ಬೆಂಗಳೂರು ಉತ್ತರ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಕೃಷ್ಣ ಭೈರೇಗೌಡ ಆರೋಪಿಸಿದ್ದಾರೆ.

ಗುರುವಾರ ಕ್ಷೇತ್ರದ ಮಹಾಲಕ್ಷ್ಮಿ ಲೇಔಟ್‌ನ ಗೆಳೆಯರ ಬಳಗದಲ್ಲಿ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಯಾದ ತಾನು ಐದು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಎರಡು ಬಾರಿ ಸಚಿವನಾಗಿದ್ದೇನೆ ಎಂದು ಹೇಳಿದರು.

ಕ್ಷೇತ್ರದ ಸಮಸ್ಯೆಗಳನ್ನು ಚೆನ್ನಾಗಿ ಅರಿತಿದ್ದೇನೆ. ಐದು ವರ್ಷ ಡಿ.ವಿ.ಸದಾನಂದಗೌಡ ಸಂಸದರಾಗಿ ಯಾರೂ ಅವರ ಮುಖವನ್ನು ನೋಡಿಲ್ಲ. ಅವರು ಜನರ ಮನಸ್ಸಿನಲ್ಲಿ ಉಳಿಯುವಂತಹ ಒಂದೇ ಒಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ ಭೀಕರ ಸ್ವರೂಪದ ಬರ ಆವರಿಸಿದೆ. ಆದರೆ, ಕೇಂದ್ರದಿಂದ ಅನುದಾನ ಕೊಡಿಸಲಿಲ್ಲ. ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ಕೇಂದ್ರದಿಂದ ಹಣ ಕೊಡಿಸುವಲ್ಲಿ ಡಿವಿಎಸ್ ನೀವು ಅಸಮರ್ಥರಾಗಿದ್ದೀರಿ. ರಾಜ್ಯ ಸರಕಾರವೆ 15 ಸಾವಿರ ಕೋಟಿ ರೂ.ವೆಚ್ಚ ಮಾಡಿದ್ದೇವೆ ಎಂದು ಹೇಳಿದರು.

ಕ್ಷೇತ್ರದ ಜನತೆ ರಾಜ್ಯದ ಮೈತ್ರಿ ಸರಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಭವಿಷ್ಯ ದೃಷ್ಟಿಯಿಂದ ನನ್ನನ್ನು ಅತ್ಯಂತ ಹೆಚ್ಚಿನ ಬಹುಮತದಿಂದ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ನೀಡಬೇಕೆಂದು ಕೃಷ್ಣಭೈರೇಗೌಡ ಮನವಿ ಮಾಡಿದರು. ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಶಾಸಕ ಗೋಪಾಲಯ್ಯ, ಸ್ಥಳೀಯ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News