ನಮ್ಮ ಆಯ್ಕೆ ಗಾಂಧಿಯೋ?, ಗೋಡ್ಸೆಯೋ? : ಬಿ.ಕೆ.ಹರಿಪ್ರಸಾದ್

Update: 2019-04-11 12:29 GMT

ಬೆಂಗಳೂರು, ಎ. 11: ಸಂವಿಧಾನ ಎನ್ನುವುದನ್ನು ಯಾವುದೋ ವಿಶ್ವ ವಿದ್ಯಾಲಯದಲ್ಲಿ ಬರೆದ ಪುಸ್ತಕವಲ್ಲ. ಬದಲಿಗೆ, ಅದು ನಮ್ಮ ದೇಶದ ಪ್ರಜೆಗಳಿಗಾಗಿ ರೂಪಿಸಿದ ಅಪರೂಪದ ಗ್ರಂಥ. ನಮಗೆ ಸರ್ವಧರ್ಮ ಸಮಭಾವ ಎಂಬ ತತ್ವದ ಅವಶ್ಯಕತೆ ಇದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.

ಗುರುವಾರ ಜಯನಗರದ ಬಿಐಟಿ ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಅವರು, ನಾವು ರಾಷ್ಟ್ರಪಿತ ಮಹಾತ್ಮ ಗಾಂಧಿಯನ್ನು ಅನುಸರಿಸಬೇಕೋ ಅಥವಾ ಅವರನ್ನು ಕೊಂದ ಗೋಡ್ಸೆಯನ್ನು ಬೆಂಬಲಿಸಬೇಕೋ ಎನ್ನುವುದನ್ನು ತೀರ್ಮಾನಿಸಬೇಕಿದೆ ಎಂದರು.

ನಿಮ್ಮಲ್ಲಿ ಬಹಳಷ್ಟು ಮಂದಿ ಮೊದಲ ಬಾರಿ ಮತ ಹಾಕುವ ಅವಕಾಶ ಸಿಕ್ಕಿದ್ದು, ತಪ್ಪದೆ ಮತ ಚಲಾಯಿಸಿ ಎಂದು ಮನವಿ ಮಾಡಿದ ಅವರು, ವಿದ್ಯಾರ್ಥಿಗಳ ಶಕ್ತಿ ಬಹಳಷ್ಟು ಜನರಿಗೆ ಗೊತ್ತಿಲ್ಲ ಎನ್ನಿಸುತ್ತದೆ. ನಾವು ವಿದ್ಯಾರ್ಥಿಗಳಾಗಿದ್ದಾಗ ನಮ್ಮ ಪ್ರತಿಭಟನೆಗಳಿಂದ ಸರಕಾರಗಳೆ ಬದಲಾಗುತ್ತಿದ್ದವು. ಆದರೆ ಇದೀಗ ನಮಗ್ಯಾಕೆ ನಾವು ಬದುಕಿದ್ರೆ ಸಾಕು ಎನ್ನುವ ಮನೋಭಾವ ಬಂದುಬಿಟ್ಟಿದೆ ಎಂದರು.

ಮೋದಿಯವರಿಗೆ ಈಗ 65 ವರ್ಷ, ಈಗ ಅವರು ಎಲ್ಲೇ ಹೋದರು ಯುವಕರು ಮೋದಿ ಎಂದು ಕೂಗುತ್ತಾರೆ. ಈ 5 ವರ್ಷದಲ್ಲಿ ಮೋದಿಯವರು ಯುವಕರಿಗೆ, ವಿದ್ಯಾರ್ಥಿಗಳಿಗೆ ಏನು ಮಾಡಿದ್ದಾರೆಂದು ಬಹಿರಂಗಪಡಿಸಲಿ. ಅದನ್ನು ಅವರು ಹೇಳಿದರೆ ನಾನು ರಾಜಕೀಯವನ್ನೇ ಬಿಡುತ್ತೇನೆ ಎಂದು ಸವಾಲು ಹಾಕಿದರು.

ಜಯನಗರ ಶಾಸಕಿ ಸೌಮ್ಯರೆಡ್ಡಿ ಮಾತನಾಡಿ, ದೇಶದಲ್ಲಿ 35 ವರ್ಷದೊಳಗಿನ ಶೇ.65ರಷ್ಟು ಜನರಿದ್ದಾರೆ. ಮತದಾನ ಕೇವಲ ನಮ್ಮ ಹಕ್ಕಲ್ಲ, ನಮ್ಮ ಕರ್ತವ್ಯ. ಜಾತಿಭೇದವಿಲ್ಲದೆ ಎಲ್ಲರನ್ನೂ ಒಗ್ಗಟ್ಟಾಗಿ ಅಭಿವೃದ್ದಿಯತ್ತ ಕೊಂಡೊಯ್ಯುವುದು ಕಾಂಗ್ರೆಸ್ ಪಕ್ಷ. ನಮಗೆ ವಿಷ ಬಿತ್ತುವ ಸರಕಾರ ಬೇಡ. ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಮೋದಿಗಾಗಿ ವೋಟ್ ಕೇಳುತ್ತಾರೆ. ಸಂವಿಧಾನ ಸುಡಲು ಹೇಳುತ್ತಾರೆ, ಮಹಿಳಾ ಮೀಸಲಾತಿ ಬೇಡ ಎನ್ನುತ್ತಾರೆ. ಇಂತಹವರು ನಮಗೆ ಬೇಕಾ? ಇದು ನಮ್ಮ ಭವಿಷ್ಯದ ಪ್ರಶ್ನೆ. ಹೀಗಾಗಿ ಹರಿಪ್ರಸಾದ್ ಅವರನು ಬೆಂಬಲಿಸಿ ಎಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News