ತೇಜಸ್ವಿ ಸೂರ್ಯಗೆ ಭಾರೀ ಹಿನ್ನಡೆ: ಮಾಧ್ಯಮಗಳ ಮೇಲೆ ಹೇರಿದ್ದ ನಿರ್ಬಂಧ ತೆರವುಗೊಳಿಸಿದ ಹೈಕೋರ್ಟ್

Update: 2019-04-12 15:04 GMT

ತೇಜಸ್ವಿ ಸೂರ್ಯ ತೇಜೋವದೆ ಪ್ರಕರಣ ಮಾಧ್ಯಮ ನಿರ್ಬಂಧ ಆಜ್ಞೆ ತೆರವುಗೊಳಿಸಿದ ಹೈಕೋರ್ಟ್

ಬೆಂಗಳೂರು, ಎ.12: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ವಿರುದ್ಧ ಯಾವುದೇ ಮಾನಹಾನಿಕರ ಸುದ್ದಿ ಪ್ರಕಟಿಸದಂತೆ ನಗರದ ಸಿವಿಲ್ ಕೋರ್ಟ್ ವಿಧಿಸಿರುವ ನಿರ್ಬಂಧವನ್ನು ಹೈಕೋರ್ಟ್ ತೆರವುಗೊಳಿಸಿದೆ.

ಸಿವಿಲ್ ಕೋರ್ಟ್ ನೀಡಿರುವ ಆದೇಶವನ್ನು ರದ್ದುಗೊಳಿಸಬೇಕೆಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಲ್.ನಾರಾಯಣಸ್ವಾಮಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಲೇವಾರಿ ಮಾಡಿತು.

ಅರ್ಜಿದಾರರ ಪರ ವಕೀಲ ಬಿ.ಎನ್.ಹರೀಶ್ ಅವರ ವಾದಗಳು ಸರಿಯಾಗಿವೆ. ಕ್ಷೇತ್ರದ ಮತದಾರ ಸೇರಿದಂತೆ ರಾಜ್ಯದ ಜನರು ಜನಪ್ರತಿನಿಧಿಯಾಗಲು ಬಯಸುವ ಹಾಗೂ ಚುನಾವಣೆಗೆ ನಿಲ್ಲುವ ಅಭ್ಯರ್ಥಿಯ ಬಗ್ಗೆ ಮಾಹಿತಿಯನ್ನು ಅರಿಯುವ ಹಕ್ಕನ್ನು ಹೊಂದಿರುತ್ತಾರೆ. ಹೀಗಾಗಿ, ಅವರ ಅಭಿವ್ಯಕ್ತಿ ಸ್ವಾತಂತ್ರಕ್ಕೆ ತಡೆ ನೀಡಲಾಗದು ಎಂದು ನ್ಯಾಯಪೀಠವು ಆದೇಶದಲ್ಲಿ ತಿಳಿಸಿದೆ. ಯಾವುದೆ ಕ್ರಿಯೆ ನಡೆಯದೆ ಮಾನಹಾನಿ ಆಗಿದೆ ಎಂದು ನಿರ್ಧರಿಸಲು ಸಾಧ್ಯವಿಲ್ಲ. ಅಲ್ಲದೆ, ಟಿವಿ ಚಾನೆಲ್‌ಗಳು ಹಾಗೂ ಸಾಮಾಜಿಕ ಜಾಲತಾಣಗಳು ತೇಜಸ್ವಿ ಸೂರ್ಯ ಅವರಿಗೆ ಸಂಬಂಧಿಸಿದ ಸುದ್ದಿಗಳನ್ನು ಪ್ರಕಟಿಸದಂತೆ ಸಿವಿಲ್ ಕೋರ್ಟ್ ನಿರ್ಬಂಧ ಹೇರಿರುವುದೂ ಸರಿಯಲ್ಲ. ಹಾಗೊಂದು ಬಾರಿ ಸೂರ್ಯ ಅವರಿಗೆ ತಮ್ಮ ವಿರುದ್ಧ ಮಾನಹಾನಿಕರ ಸುದ್ದಿ ಪ್ರಕಟವಾಗಿದೆ ಎಂದು ಅನಿಸಿದರೆ, ಚುನಾವಣಾ ಆಯೋಗದೆ ಬಳಿ ಹೋಗಿ ಪರಿಹಾರ ಪಡೆಯಬಹುದು ಎಂದು ನ್ಯಾಯಪೀಠವು ಆದೇಶದಲ್ಲಿ ತಿಳಿಸಿದೆ.

ಅರ್ಜಿದಾರರ ಪರ ವಾದಿಸಿದ್ದ ವಕೀಲ ಬಿ.ಎನ್.ಹರೀಶ್ ಅವರು, ಜನಪ್ರತಿನಿಧಿಯಾಗಲು ಬಯಸುವ ಅಭ್ಯರ್ಥಿಗಳ ಬಗ್ಗೆ ಕ್ಷೇತ್ರದ ಮತದಾರರು ಸೇರಿ ಎಲ್ಲರಿಗೂ ಅವರ ಬಗ್ಗೆ ತಿಳಿಯಬೇಕೆಂಬ ಆಸೆ ಇರುತ್ತದೆ. ಹೀಗಾಗಿ, ಸಿವಿಲ್ ಕೋರ್ಟ್ ತೇಜಸ್ವಿ ಸೂರ್ಯ ಅವರ ಬಗ್ಗೆ ಸುದ್ದಿ ಪ್ರಕಟಿಸದಂತೆ ನಿರ್ಬಂಧಿಸಿರುವುದು ಸರಿಯಲ್ಲ ಎಂದು ಪೀಠಕ್ಕೆ ತಿಳಿಸಿದ್ದರು.

ತೇಜಸ್ವಿ ಸೂರ್ಯ ಪರ ವಾದಿಸಿದ್ದ ಹಿರಿಯ ವಕೀಲ ಅಶೋಕ್ ಹಾರನಹಳ್ಳಿ ಅವರು, ತೇಜಸ್ವಿ ಸೂರ್ಯ ಅವರ ವಿರುದ್ದ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದುರುದ್ದೇಶದಿಂದ ಕೂಡಿದೆ. ಹಾಗೂ ಅರ್ಜಿದಾರರ ದಕ್ಷಿಣ ಲೋಕಸಭಾ ಕ್ಷೇತ್ರದ ಮತದಾರರು ಅಲ್ಲ. ಹೀಗಾಗಿ, ಈ ಅರ್ಜಿಯನ್ನು ವಜಾಗೊಳಿಸಬೇಕೆಂದು ಪೀಠಕ್ಕೆ ಮನವಿ ಮಾಡಿದ್ದರು.

ಪ್ರಕರಣವೇನು: ತೇಜಸ್ವಿ ಸೂರ್ಯ ಅವರ ಬಗ್ಗೆ ಮಹಿಳೆಯೊಬ್ಬರು ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಈ ಸಂಬಂಧ ಸೂರ್ಯ ಅವರು ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ನನ್ನ ಘನತೆಗೆ ಕುಂದು ತರುವಂತಹ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆ ನೀಡಬೇಕೆಂದು ಕೋರಿದ್ದರು. ಹೀಗಾಗಿ, ಇದನ್ನು ಮಾನ್ಯ ಮಾಡಿದ್ದ ಸಿವಿಲ್ ಕೋರ್ಟ್ ಟಿವಿ ಚಾನೆಲ್‌ಗಳಿಗೆ ಸೂರ್ಯನ ವಿರುದ್ದ ಮಾನಹಾನಿಕರ ಎನಿಸಬಹುದಾದಂತಹ ಸುದ್ದಿಯನ್ನು ಪ್ರಟಿಸದಂತೆ ನಿರ್ಭಂಧ ವಿಧಿಸಿತ್ತು. ಆದರೆ ಇದೀಗ ಹೈಕೋರ್ಟ್ ಮಾಧ್ಯಮಗಳ ಮೇಲೆ ಹೇರಿದ್ದ ನಿರ್ಬಂಧ ತೆರವುಗೊಳಿಸಿದ್ದು, ತೇಜಸ್ವಿ ಸೂರ್ಯಗೆ ಭಾರೀ ಹಿನ್ನಡೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News