'ಸೂಕ್ತ ಭದ್ರತೆ ನೀಡಿದರೆ ಯಡಿಯೂರಪ್ಪರಿಗೆ ಸಂಬಂಧಿಸಿದ ಪೆನ್‌ಡ್ರೈವ್, ಸಿಡಿ, ಡೈರಿ ಬಹಿರಂಗಪಡಿಸುತ್ತೇನೆ'

Update: 2019-04-12 12:13 GMT
ಯಡಿಯೂರಪ್ಪ

ಬೆಂಗಳೂರು, ಎ.12: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಸಂಬಂಧಪಟ್ಟ ಪೆನ್‌ಡ್ರೈವ್, ಸಿಡಿ ಹಾಗೂ ಡೈರಿ ಬಹಿರಂಗಪಡಿಸಲು ಸೂಕ್ತ ಭದ್ರತೆ ನೀಡಿ ಎಂದು ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪ ಅವರ ಮಾಜಿ ಆಪ್ತ ಸಹಾಯಕ ಎನ್.ಎನ್.ವಿನಯ್ ಕೋರಿದ್ದಾರೆ.

ಶುಕ್ರವಾರ ಇಲ್ಲಿನ ಅಮೃತಹಳ್ಳಿ ಪೊಲೀಸ್ ಠಾಣೆಗೆ ತೆರಳಿ, ಜೀವ ಬೆದರಿಕೆ ಇದ್ದು, ಸೂಕ್ತ ರಕ್ಷಣೆ ನೀಡುವಂತೆ ಮನವಿ ಸಲ್ಲಿಸಿದ ಬಳಿಕ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.

2017 ಮೇ 11ರಂದು ಮಹಾಲಕ್ಷ್ಮೀ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೆಲವು ಅಪರಿಚಿತ ವ್ಯಕ್ತಿಗಳು ನನ್ನನ್ನು ಅಪಹರಿಸಲು ವಿಫಲ ಯತ್ನ ನಡೆಸಿ, ಬಳಿಕ ಗಂಭೀರ ಹಲ್ಲೆ ನಡೆಸಿದ್ದರು. ನಂತರ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಆರೋಪಿಗಳು, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪಅವರ ಆಪ್ತ ಸಂತೋಷ್ ಅವರ ಸೂಚನೆ ಮೇರೆಗೆ ಅಪಹರಣಕ್ಕೆ ಯತ್ನಿಸಿರುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಈ ಸಂಬಂಧ ಸಂತೋಷ್ ನನ್ನು ವಿಚಾರಣೆಗೊಳಪಡಿಸಿದಾಗ ವಿನಯ್ ಬಳಿ ಬಿ.ಎಸ್.ಯಡಿಯೂರಪ್ಪಅವರ ತೇಜೋವಧೆ ಆಗುವಂತಹ ಡೈರಿ, ಸಿಡಿ ಮತ್ತು ಪೆನ್‌ಡ್ರೈವ್ ಇದ್ದು ಅವುಗಳನ್ನು ವಶಕ್ಕೆ ಪಡೆಯಲು ರಾಜೇಂದ್ರ ಅರಸ್ ಎಂಬುವರಿಗೆ ಹೇಳಲಾಗಿತ್ತು ಎಂದು ತಿಳಿಸಿದ್ದು,  ವಿನಯ್ ಸಂತೋಷ್ ನೀಡಿರುವ ಹೇಳಿಕೆಯಂತೆ ನನ್ನ ಬಳಿ ಇರುವ ಸಿಡಿ, ಪೆನ್‌ಡ್ರೈವ್ ಮತ್ತು ಡೈರಿಯನ್ನು ಹೆಚ್ಚಿನ ವಿಚಾರಣೆಗಾಗಿ ನಮಗೆ ನೀಡುವಂತೆ ಪೊಲೀಸರು ನೋಟಿಸ್ ನೀಡಿದ್ದು, ತನಿಖಾ ದೃಷ್ಟಿಯಿಂದ ನನ್ನ ಬಳಿ ಇರುವ ಪ್ರಮುಖ ದಾಖಲೆಗಳನ್ನು ನಮ್ಮ ವಕೀಲರೊಂದಿಗೆ ಚರ್ಚಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಅಥವಾ ನ್ಯಾಯಾಲಯಕ್ಕೆ ತಕ್ಷಣ ಒಪ್ಪಿಸಲು ಸಿದ್ದನಿರುತ್ತೇನೆ. ಆದರೆ ಆರೋಪಿ ಸಂತೋಷ್ ಮತ್ತವರ ಬೆಂಬಲಿಗರು ಮತ್ತೆ ನನ್ನ ಮೇಲೆ ದಾಳಿ ನಡೆಸಿ ಹತ್ಯೆ ಮಾಡಿಯಾದರೂ ದಾಖಲೆ ಕಸಿದು ಹೋಗಲು ಯತ್ನಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನನಗೆ ಮತ್ತು ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಬೇಕಾಗಿ ಪೊಲೀಸ್ ಅಧಿಕಾರಿಗಳಿಗೆ ವಿನಯ್  ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News