ವೆಸ್ಟ್‌ಇಂಡೀಸ್ ಕ್ರಿಕೆಟ್‌ನಲ್ಲಿ ದಿಢೀರ್ ಬದಲಾವಣೆ: ಕೋಚ್, ಆಯ್ಕೆ ಸಮಿತಿಯ ಮುಖ್ಯಸ್ಥ ವಜಾ

Update: 2019-04-12 18:55 GMT

ಆ್ಯಂಟಿಗುವಾ, ಎ.12: ವಿಶ್ವಕಪ್‌ಗೆ ಇನ್ನು ಕೇವಲ 7 ವಾರಗಳು ಬಾಕಿ ಇರುವಂತೆಯೇ ಮುಖ್ಯ ಕೋಚ್ ರಿಚರ್ಡ್ ಪೈಬಸ್‌ರ ವಜಾ ಸೇರಿದಂತೆ ವೆಸ್ಟ್ ಇಂಡೀಸ್ ಕ್ರಿಕೆಟ್‌ನಲ್ಲಿ ಗುರುವಾರ ದಿಢೀರ್ ಬದಲಾವಣೆೆಗಳಾಗಿವೆ.

 ತಂಡದ ಮಧ್ಯಂತರ ಮುಖ್ಯ ಕೋಚ್ ಆಗಿ ಫ್ಲಾಯ್ಡಾ ರೈಫರ್ ನೇಮಿಸಲಾಗಿದೆ. ಆಯ್ಕೆಗಾರರ ಮುಖ್ಯಸ್ಥ ಕರ್ಟಿ ಬ್ರೌನ್ ಅವರ ಸ್ಥಾನಕ್ಕೆ ಮಧ್ಯಂತರ ಮುಖ್ಯಸ್ಥರಾಗಿ ರಾಬರ್ಟ್ ಹೇನ್ಸ್ ನೇಮಕ ಅಲ್ಲದೆ ಪೂರ್ಣ ಆಯ್ಕೆ ಸಮಿತಿಯನ್ನೇ ಬದಲಾಯಿಸಲಾಗಿದೆ.

‘‘ನಾವು ಆಯ್ಕೆ ಮಾಡಿದ ಮಧ್ಯಂತರ ಆಯ್ಕೆ ಸಮಿತಿಯ ಮುಖ್ಯಸ್ಥ ಹೇನ್ಸ್ ಅವರು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಾರೆ ಹಾಗೂ ನಮ್ಮ ಆಯ್ಕೆ ನೀತಿಯನ್ನು ಹಂಚಲಿದ್ದಾರೆ’’ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್(ಸಿಡಬ್ಲುಐ) ಅಧ್ಯಕ್ಷ ರಿಕಿ ಸ್ಕೆರಿಟ್ ಹೇಳಿದ್ದಾರೆ.

ಇಂಗ್ಲೆಂಡ್ ಮೂಲದ ಪೈಬಸ್ ಅವರನ್ನು ಕೋಚ್ ಹುದ್ದೆಗೆ ಆಯ್ಕೆ ಮಾಡಿದ್ದು ಡ್ಯಾರೆನ್ ಸಮಿ ಸೇರಿದಂತೆ ಹಲವರ ಟೀಕೆಗೆ ಒಳಗಾಗಿತ್ತು.

 ತಂಡದ ಕೋಚ್ ಬದಲಾವಣೆ ಯಾಗಿರುವುದರಿಂದ ಡ್ವೇನ್ ಬ್ರಾವೊ, ಕೀರನ್ ಪೊಲಾರ್ಡ್ ಸೇರಿದಂತೆ ಸ್ಟಾರ್ ಆಟಗಾರರು ಮರಳಿ ತಂಡಕ್ಕೆ ಸೇರ್ಪಡೆಯಾಗುವ ನಿರೀಕ್ಷೆಯನ್ನು ಹುಟ್ಟುಹಾಕಿದೆ. ಈ ಆಟಗಾರರು ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಫ್ರಾಂಚೈಸಿಗಳ ಪರವಾಗಿಯೇ ಹೆಚ್ಚು ಆಡುತ್ತಿದ್ದಾರೆ. ಅಲ್ಲದೆ ಈ ಐಪಿಎಲ್‌ನಲ್ಲಿ ಭಾರೀ ಸದ್ದು ಮಾಡುತ್ತಿರುವ ಆ್ಯಂಡ್ರೆ ರಸೆಲ್ ಕೂಡ ಕಳೆದ ವರ್ಷದ ಜುಲೈನಿಂದ ರಾಷ್ಟ್ರೀಯ ತಂಡದ ಪರ ಏಕದಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News