ಬಿಹಾರ: ರಾಮ ಮಂದಿರ ವಿಚಾರದಲ್ಲಿ ಬಿಜೆಪಿ, ಜೆಡಿ(ಯು) ಕಾರ್ಯಕರ್ತರ ಭಿನ್ನರಾಗ

Update: 2019-04-13 09:34 GMT

ಹಾಜಿಪುರ್(ಬಿಹಾರ), ಎ.13: ಸಾರ್ವಜನಿಕ ಸಭೆಯಲ್ಲಿ ರಾಮಮಂದಿರ ವಿಚಾರಕ್ಕೆ ಸಂಬಂಧಿಸಿ ಬಿಜೆಪಿ ಹಾಗೂ ಸಂಯುಕ್ತ ಜನತಾದಳ ಕಾರ್ಯಕರ್ತರ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಗಲಾಟೆ ನಡೆದ ಘಟನೆ ಶುಕ್ರವಾರ ನಡೆದಿದೆ.

 ಚುನಾವಣಾ ಪ್ರಚಾರ ಅಭಿಯಾನದಲ್ಲಿ ಮಂದಿರ ನಿರ್ಮಾಣ ಮುಖ್ಯ ವಿಚಾರ ಆಗಬಾರದು ಎಂದು ಜೆಡಿಯು ನಾಯಕ ಸಂಜಯ್ ವರ್ಮಾ ಜಂಟಿ ಸಭೆಯಲ್ಲಿ ಹೇಳಿದ ತಕ್ಷಣ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಲಾರಂಭಿಸಿದರು. ಮಾತ್ರವಲ್ಲ  ಕುರ್ಚಿಗಳನ್ನು ಎಸೆದು ವೇದಿಕೆ ಮೇಲೆ ನುಗ್ಗಿದರು.

ಬಿಜೆಪಿ ಹಾಗೂ ಜೆಡಿಯು ಮಧ್ಯೆ ರಾಮಮಂದಿರ, ಆರ್ಟಿಕಲ್ 370 ಹಾಗೂ ಆರ್ಟಿಕಲ್ 35ಎ ಸಹಿತ ಹಲವು ವಿಷಯಗಳಿಗೆ ಸಂಬಂಧಿಸಿ ಅಭಿಪ್ರಾಯ ಭೇದವಿದೆ. ಜೆಡಿಯು ಎ.14 ರಂದು ತನ್ನ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ. ರಾಮಮಂದಿರ ನಿರ್ಮಾಣ, ಜಮ್ಮು ಹಾಗೂ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿಕೆ ಹಾಗೂ ಪೌರತ್ವ ಮಸೂದೆ ಸೇರಿದಂತೆ ಹಲವು ವಿಚಾರಳಲ್ಲಿ ಬಿಜೆಪಿಯೊಂದಿಗೆ ಜೆಡಿಯು ಭಿನ್ನಾಭಿಪ್ರಾಯ ಹೊಂದಿದೆ.

ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಮಂದಿರ ವಿಚಾರಕ್ಕಿಂತಲೂ ಆರ್ಟಿಕಲ್ 370, ಆರ್ಟಿಕಲ್ 35 ಎ ಹಾಗೂ ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರದಲ್ಲಿ ಗಂಭೀರ ನಿಲುವು ತಳೆದಿದೆ. ಎನ್‌ಡಿಎ ಪಾಲುದಾರ ಪಕ್ಷವಾಗಿರುವ ಬಿಜೆಪಿ ಹಾಗೂ ಜೆಡಿಯು ಬಿಹಾರದಲ್ಲಿ ಮೈತ್ರಿಕೂಟ ರಚಿಸಿಕೊಂಡಿದ್ದು ತಲಾ 17 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿವೆ. ರಾಮವಿಲಾಸ್ ಪಾಸ್ವಾನ್‌ರ ಎಲ್‌ಜೆಪಿ 6 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ರಾಜ್ಯದಲ್ಲಿ ಒಟ್ಟು 40 ಲೋಕಸಭಾ ಕ್ಷೇತ್ರಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News