ಜನಪ್ರತಿನಿಧಿಗಳು ಎಲ್ಲರಿಗೂ ನೆರವಾಗಬೇಕು: ಹೇಮಾಮಾಲಿನಿ

Update: 2019-04-13 14:28 GMT

ಹೊಸದಿಲ್ಲಿ, ಎ.13: ಅಲ್ಪಸಂಖ್ಯಾತ ಸಮುದಾಯದ ಜನತೆ ಬಿಜೆಪಿಗೆ ಓಟು ಹಾಕದಿದ್ದರೂ ಪಕ್ಷದ ಮುಖಂಡರು ಎಲ್ಲರಿಗೂ ಸಹಾಯ ಮಾಡಬೇಕು ಎಂದು ಬಿಜೆಪಿ ಸಂಸದೆ ಹೇಮಾಮಾಲಿನಿ ಹೇಳಿದ್ದಾರೆ.

ಉತ್ತರಪ್ರದೇಶದ ಸುಲ್ತಾನ್‌ಪುರದಲ್ಲಿ ಕಣಕ್ಕಿಳಿದಿರುವ ಕೇಂದ್ರ ಸಚಿವೆ ಮೇನಕಾ ಗಾಂಧಿ ಚುನಾವಣಾ ಪ್ರಚಾರದ ಸಂದರ್ಭ ಮಾಡಿದ ಭಾಷಣದ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಈ ಬಗ್ಗೆ ಹೇಮಾಮಾಲಿನಿ ಪ್ರತಿಕ್ರಿಯಿಸುತ್ತಿದ್ದರು.

ಮುಸ್ಲಿಂ ಸಮುದಾಯದ ಮಹಿಳೆಯರು ತ್ರಿವಳಿ ತಲಾಖ್ ವಿಷಯದ ಬಗ್ಗೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಮುಸ್ಲಿಂ ಸಮುದಾಯದ ಜನತೆ ಬಿಜೆಪಿಗೆ ಮತ ನೀಡದಿದ್ದರೂ ಮುಖಂಡರು ಎಲ್ಲರಿಗೂ ನೆರವಾಗಲೇಬೇಕು. ಇದು ನನ್ನ ಅಭಿಪ್ರಾಯ. ಪ್ರತಿಯೊಬ್ಬರ ಅಭಿಪ್ರಾಯ ಭಿನ್ನವಾಗಿರುತ್ತದೆ ಎಂದು ಹೇಮಾಮಾಲಿನಿ ಹೇಳಿದ್ದಾರೆ.

ಮಥುರಾ ಕ್ಷೇತ್ರದ ಸಂಸದೆಯಾಗಿರುವ ಹೇಮಾಮಾಲಿನಿ, ಈ ಕ್ಷೇತ್ರದಿಂದ ಮರು ಆಯ್ಕೆ ಬಯಸಿದ್ದು ತನ್ನ ಗೆಲುವು ನಿಶ್ಚಿತ ಎಂದಿದ್ದಾರೆ. ಕಳೆದ 5 ವರ್ಷಗಳಲ್ಲಿ 250ಕ್ಕೂ ಹೆಚ್ಚು ಬಾರಿ ಕ್ಷೇತ್ರಕ್ಕೆ ಭೇಟಿ ನೀಡಿದ್ದು ರಸ್ತೆ, ವಿದ್ಯುತ್‌ದೀಪ, ಶೌಚಾಲಯ ಹೀಗೆ ಹಲವು ಅಭಿವೃದ್ಧಿ ಕಾರ್ಯ ನಡೆಸಿದ್ದೇನೆ. ಈಗ ವಿಷಯ ಬದಲಾಗುತ್ತಿದ್ದು ಜನತೆ ಜಾತಿ ರಾಜಕೀಯದ ಬದಲು ಅಭಿವೃದ್ಧಿ ಕಾರ್ಯ ಗಮನಿಸಿ ಮತ ಹಾಕುತ್ತಾರೆ ಎಂದು ಹೇಳಿದರು.

ನನಗೆ ಮತ ನೀಡಿ, ಇಲ್ಲದಿದ್ದರೆ ನಿಮ್ಮ ಮನವಿಗಳಿಗೆ ಸ್ಪಂದಿಸಲು ನಾನು ಮನಸ್ಸು ಮಾಡದಿರಬಹುದು ಎಂದು ಮೇನಕಾ ಗಾಂಧಿ ಹೇಳಿದ್ದರು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಸುಲ್ತಾನ್‌ಪುರ ಜಿಲ್ಲಾಧಿಕಾರಿ ಮೇನಕಾ ಗಾಂಧಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಿದ್ದಾರೆ. ಬಳಿಕ ಸ್ಪಷ್ಟೀಕರಣ ನೀಡಿದ ಮೇನಕಾ ಗಾಂಧಿ, ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಗೆಲುವಿನಲ್ಲಿ ಮುಸ್ಲಿಮರ ಸಹಯೋಗವೂ ಅತ್ಯಗತ್ಯವಾಗಿದೆ ಎಂದಷ್ಟೇ ನಾನು ಹೇಳಿದ್ದು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News