ಮಸೂದ್‌ನನ್ನು ಉಗ್ರ ಪಟ್ಟಿಗೆ ಸೇರಿಸುವ ಫ್ರಾನ್ಸ್, ಅಮೆರಿಕ, ಬ್ರಿಟನ್ ನಿರ್ಣಯ ತಡೆ ತೆರವಿಗೆ ಚೀನಾಕ್ಕೆ ಗಡುವು?

Update: 2019-04-13 16:55 GMT

ವಾಶಿಂಗ್ಟನ್, ಎ. 13: ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶೆ ಮುಹಮ್ಮದ್‌ನ ಸ್ಥಾಪಕ ಮಸೂದ್ ಅಝರ್‌ನನ್ನು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಗೆ ಸೇರಿಸುವ ಭದ್ರತಾ ಮಂಡಳಿ ನಿರ್ಣಯಕ್ಕೆ ವಿಧಿಸಿರುವ ತಡೆಯನ್ನು ತೆರವುಗೊಳಿಸಲು ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್‌ಗಳು ಚೀನಾಕ್ಕೆ ಗಡುವು ನೀಡಿವೆ ಎಂದು ಹೇಳಲಾಗಿದೆ.

ಫೆಬ್ರವರಿ ತಿಂಗಳಲ್ಲಿ ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್‌ಪಿಎಫ್ ಯೋಧರ ಮೇಲೆ ನಡೆದ ಭಯೋತ್ಪಾದಕ ದಾಳಿಯ ಹೊಣೆಯನ್ನು ಜೈಶೆ ಮುಹಮ್ಮದ್ ವಹಿಸಿಕೊಂಡಿರುವುದನ್ನು ಸ್ಮರಿಸಬಹುದಾಗಿದೆ. ದಾಳಿಯಲ್ಲಿ 40 ಮಂದಿ ಯೋಧರು ಹುತಾತ್ಮರಾಗಿದ್ದಾರೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಲಾಗಿರುವ ನಿರ್ಣಯಕ್ಕೆ ಎಪ್ರಿಲ್ 23ರ ಒಳಗೆ ಚೀನಾ ಅನುಮೋದನೆ ನೀಡಬೇಕು ಎಂಬುದಾಗಿ ಈ ಮೂರು ದೇಶಗಳು ಬಯಸಿವೆ. ಈ ವೇಳೆಗೆ ಅನುಮೋದನೆ ಸಿಗದಿದ್ದರೆ ತಾವು ಮುಂದಿನ ಕ್ರಮ ತೆಗೆದುಕೊಳ್ಳುವುದಾಗಿ ಅವು ಸ್ಪಷ್ಟಪಡಿಸಿವೆ. ಅಂದರೆ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಚರ್ಚೆ, ಮತ ಹಾಗೂ ಅನುಮೋದನೆಗಾಗಿ ಔಪಚಾರಿಕ ನಿರ್ಣಯವನ್ನು ಮಂಡಿಸುವುದಾಗಿ ಅವು ಹೇಳಿವೆ ಎನ್ನಲಾಗಿದೆ.

ಆದರೆ, ಇದನ್ನು ಅಮೆರಿಕ ಖಚಿತಪಡಿಸಿಲ್ಲ. ‘‘ಈ ಬಗ್ಗೆ ಹೇಳಿಕೆ ನೀಡಲು ನಾವು ನಿರಾಕರಿಸುತ್ತೇವೆ’’ ಎಂದು ಅದು ಹೇಳಿದೆ.

ಫ್ರಾನ್ಸ್‌ನ ಪ್ರತಿಕ್ರಿಯೆಗಾಗಿ ಕಾಯಲಾಗುತ್ತಿದೆ.

ಪುಲ್ವಾಮ ದಾಳಿಯ ಬಳಿಕ, ನಿರ್ಣಯವನ್ನು ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್‌ಗಳು ಜಂಟಿಯಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಿದ್ದವು. ಆದರೆ, ಈ ನಿರ್ಣಯಕ್ಕೆ ಚೀನಾವು ತಾಂತ್ರಿಕ ತಡೆ ಹೇರಿತ್ತು. ಇದೇ ಭದ್ರತಾ ಮಂಡಳಿಯಲ್ಲಿ ಇದಕ್ಕೂ ಮೊದಲು ಮಂಡಿಸಲಾಗಿದ್ದ ಎಲ್ಲ ಮೂರು ಇದೇ ರೀತಿಯ ನಿರ್ಣಯಗಳಿಗೂ ಚೀನಾ ತಾಂತ್ರಿಕ ತಡೆ ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News