ರಾಜಸ್ಥಾನಕ್ಕೆ ಒಲಿದ ಜಯ

Update: 2019-04-13 18:39 GMT

ಮುಂಬೈ, ಎ.13: ಆರಂಭಿಕ ಆಟಗಾರ ಜೋಸ್ ಬಟ್ಲರ್ ಭರ್ಜರಿ ಬ್ಯಾಟಿಂಗ್(89 ರನ್, 43 ಎಸೆತ)ಬೆಂಬಲದಿಂದ ರಾಜಸ್ಥಾನ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ ತಂಡವನ್ನು ಅದರದೇ ನೆಲದಲ್ಲಿ ನೆಲಕ್ಕುರುಳಿಸಿದೆ. ಈ ವರ್ಷದ ಐಪಿಎಲ್‌ನಲ್ಲಿ 2ನೇ ಗೆಲುವು ದಾಖಲಿಸಿದೆ.

ಇಲ್ಲಿನ ವಾಂಖೆಡೆ ಸ್ಟೇಡಿಯಂನಲ್ಲಿ ಶನಿವಾರ ನಡೆದ 27ನೇ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು. ಗೆಲ್ಲಲು ಕಠಿಣ ಗುರಿ ಪಡೆದ ರಾಜಸ್ಥಾನ ರಾಯಲ್ಸ್ ತಂಡ 19.3 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 188 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ನಾಯಕ ಅಜಿಂಕ್ಯ ರಹಾನೆ(37,21 ಎಸೆತ)ಜೊತೆ ಇನಿಂಗ್ಸ್ ಆರಂಭಿಸಿದ ಬಟ್ಲರ್(89,43 ಎಸೆತ, 8 ಬೌಂಡರಿ, 7 ಸಿಕ್ಸರ್)6.2 ಓವರ್‌ಗಳಲ್ಲಿ 60 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. ರಹಾನೆ ಔಟಾದ ಬಳಿಕ ಸಂಜು ಸ್ಯಾಮ್ಸನ್‌ರೊಂದಿಗೆ ಕೈಜೋಡಿಸಿದ ಬಟ್ಲರ್ 2ನೇ ವಿಕೆಟ್‌ಗೆ 87 ರನ್ ಜೊತೆಯಾಟ ನಡೆಸಿ ತಂಡದ ರನ್ ಚೇಸಿಂಗ್‌ಗೆ ಬಲ ನೀಡಿದರು. ಜೋಸೆಫ್ ಎಸೆದ 13ನೇ ಓವರ್‌ನಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 28 ರನ್ ಗಳಿಸಿದ ಬಟ್ಲರ್ ಬಿರುಸಿನ ಬ್ಯಾಟಿಂಗ್ ಮಾಡಿದರು. ಅಪಾಯಕಾರಿಯಾಗಿ ಪರಿಣಮಿಸಿದ್ದ ಬಟ್ಲರ್‌ಗೆ ದೀಪರ್ ಚಹಾರ್ ಪೆವಿಲಿಯನ್ ಹಾದಿ ತೋರಿಸಿದರು. ಆಗ ರಾಜಸ್ಥಾನದ ಸ್ಕೋರ್147ಕ್ಕೆ 2.

ಸ್ಮಿತ್ ಹಾಗೂ ಸ್ಯಾಮ್ಸನ್ 3ನೇ ವಿಕೆಟ್‌ಗೆ 23 ರನ್ ಸೇರಿಸಲಷ್ಟೇ ಶಕ್ತರಾದರು. 26 ಎಸೆತಗಳಲ್ಲಿ 31 ರನ್ ಗಳಿಸಿದ ಸ್ಯಾಮ್ಸನ್ ವೇಗಿ ಜಸ್‌ಪ್ರಿತ್ ಬುಮ್ರಾ ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು. ಸ್ಯಾಮ್ಸನ್, ರಾಹುಲ್ ತ್ರಿಪಾಠಿ ಹಾಗೂ ಲಿವಿಂಗ್‌ಸ್ಟೋನ್ ಪೆವಿಲಿಯನ್‌ಗೆ ಪರೇಡ್ ನಡೆಸಿದರು. ರಾಜಸ್ಥಾನದ ಗೆಲುವಿಗೆ ಅಂತಿಮ ಓವರ್‌ನಲ್ಲಿ 6 ರನ್ ಅಗತ್ಯವಿತ್ತು. ಹಾರ್ದಿಕ್ ಪಾಂಡ್ಯ ಎಸೆದ 20ನೇ ಓವರ್‌ನ ಮೊದಲ ಎಸೆತದಲ್ಲಿ 2 ರನ್ ಗಳಿಸಿದ ಶ್ರೇಯಸ್ ಗೋಪಾಲ್ ಅದೇ ಓವರ್‌ನ 3ನೇ ಎಸೆತದಲ್ಲಿ ಬೌಂಡರಿ ಗಳಿಸಿ ಇನ್ನೂ 3 ಎಸೆತ ಬಾಕಿ ಇರುವಾಗಲೇ ತಂಡಕ್ಕೆ ಗೆಲುವು ತಂದರು.

ಕಳೆದ 3 ಪಂದ್ಯಗಳಲ್ಲಿ ಜಯ ಸಾಧಿಸಿ ಐಪಿಎಲ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಮುಂಬೈ ಈ ಸೋಲಿನಿಂದ ನಿರಾಸೆ ಅನುಭವಿಸಿತು. ಮುಂಬೈ ಪರ ಕೃಣಾಲ್ ಪಾಂಡ್ಯ(3-34) ಹಾಗೂ ಜಸ್‌ಪ್ರಿತ್ ಬುಮ್ರಾ(2-23)ಐದು ವಿಕೆಟ್ ಹಂಚಿಕೊಂಡರು.

<ಮುಂಬೈ ಇಂಡಿಯನ್ಸ್ 187/5: ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡದ ಪರ ನಾಯಕ ರೋಹಿತ್ ಶರ್ಮಾ(47, 32 ಎಸೆತ) ಹಾಗೂ ಕ್ವಿಂಟನ್ ಡಿಕಾಕ್(84,52 ಎಸೆತ, 6 ಬೌಂಡರಿ, 4 ಸಿಕ್ಸರ್)ಮೊದಲ ವಿಕೆಟ್‌ಗೆ 96 ರನ್ ಸೇರಿಸಿ ಉತ್ತಮ ಬುನಾದಿ ಹಾಕಿಕೊಟ್ಟರು. 200ಕ್ಕೂ ಅಧಿಕ ರನ್ ಗಳಿಸುವ ವಿಶ್ವಾಸದಲ್ಲಿದ್ದ ಮುಂಬೈಗೆ ಜೊಫ್ರಾ ಅರ್ಚರ್(3-39) ಕಡಿವಾಣ ಹಾಕಿದರು. ಕನ್ನಡಿಗ ಶ್ರೇಯಸ್ ಗೋಪಾಲ್ 4 ಓವರ್‌ಗಳಲ್ಲಿ ಕೇವಲ 21 ರನ್ ನೀಡಿ ರನ್ ವೇಗವನ್ನು ನಿಯಂತ್ರಿಸಿದರು.

ಹಾರ್ದಿಕ್ ಪಾಂಡ್ಯ(ಔಟಾಗದೆ 28), ಸೂರ್ಯಕುಮಾರ್ ಯಾದವ್(16)ಎರಡಂಕೆಯ ಸ್ಕೋರ್ ದಾಖಲಿಸಿದರು. ಅಂತಿಮವಾಗಿ ಮುಂಬೈ 7 ವಿಕೆಟ್ ನಷ್ಟಕ್ಕೆ 187 ರನ್ ಗಳಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News