ಟಿ-20 ಕ್ರಿಕೆಟ್‌ನಲ್ಲಿ 200 ಪಂದ್ಯಗಳನ್ನು ಆಡಿದ ಮೊದಲ ತಂಡ ಮುಂಬೈ

Update: 2019-04-13 18:44 GMT

ಹೊಸದಿಲ್ಲಿ, ಎ.13: ಹನ್ನೆರಡನೇ ಆವೃತ್ತಿಯ ಐಪಿಎಲ್‌ನಲ್ಲಿ 100 ಪಂದ್ಯಗಳಲ್ಲಿ ಜಯ ಸಾಧಿಸಿದ ಮೊದಲ ತಂಡ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಇದೀಗ ಮತ್ತೊಂದು ದಾಖಲೆ ನಿರ್ಮಿಸಿದೆ. ಟಿ-20 ಕ್ರಿಕೆಟ್‌ನಲ್ಲಿ 200 ಪಂದ್ಯಗಳನ್ನು ಆಡಿರುವ ಮೊದಲ ತಂಡವೆಂಬ ಹಿರಿಮೆಗೆ ಪಾತ್ರವಾಗಿದೆ.

ಮೂರು ಬಾರಿ ಐಪಿಎಲ್ ಚಾಂಪಿಯನ್ ಆಗಿರುವ ಮುಂಬೈ ಶನಿವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡುವ ಮೂಲಕ ಟಿ-20 ಕ್ರಿಕೆಟ್‌ನಲ್ಲಿ 200ನೇ ಪಂದ್ಯದಲ್ಲಿ ಆಡಿದೆ. ಈ ಪಂದ್ಯಕ್ಕಿಂತ ಮೊದಲು ಮುಂಬೈ 113 ಪಂದ್ಯಗಳಲ್ಲಿ ಗೆಲುವು ಹಾಗೂ 84 ಪಂದ್ಯಗಳಲ್ಲಿ ಸೋತಿದೆ. ಎರಡು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ.

 ಮುಂಬೈ ಇಂಡಿಯನ್ಸ್ ಆಡಿರುವ 200 ಪಂದ್ಯಗಳ ಪೈಕಿ 178 ಪಂದ್ಯಗಳನ್ನು ಐಪಿಎಲ್ ಟೂರ್ನಿಯಲ್ಲಿ ಆಡಿದ್ದರೆ, 22 ಪಂದ್ಯಗಳನ್ನು ಚಾಂಪಿಯನ್ಸ್ ಲೀಗ್ ಟ್ವೆಂಟಿ-20ಯಲ್ಲಿ ಆಡಿದೆ. ಇಂಗ್ಲೆಂಡ್ ಕೌಂಟಿ ತಂಡ ಸಮರ್‌ಸೆಟ್ ಈ ತನಕ 199 ಟಿ-20 ಪಂದ್ಯಗಳನ್ನು ಆಡಿದ್ದು, 200 ಪಂದ್ಯಗಳ ಮೈಲುಗಲ್ಲು ತಲುಪುವ ಹೊಸ್ತಿಲಲ್ಲಿದೆ. ಹ್ಯಾಂಪ್‌ಶೈರ್ ಈವರೆಗೆ 194 ಪಂದ್ಯಗಳನ್ನು ಆಡಿ ಸಮರ್‌ಸೆಟ್‌ಗೆ ಪೈಪೋಟಿ ನೀಡುತ್ತಿದೆ. 188 ಟಿ-20 ಪಂದ್ಯಗಳನ್ನು ಆಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗರಿಷ್ಠ ಐಪಿಎಲ್ ಪಂದ್ಯಗಳನ್ನು ಆಡಿರುವ ತಂಡಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಕೋಲ್ಕತಾ ನೈಟ್ ರೈಡರ್ಸ್(187)ಮೂರನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News