ನೀರಿನ ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದ ಮಹಿಳೆಯರಿಗೆ ಗುಜರಾತ್ ಸಚಿವ ಹೇಳಿದ್ದೇನು ಗೊತ್ತೇ ?

Update: 2019-04-14 06:28 GMT
ಕನ್ವರ್‌ಜಿ ಬವಾಲಿಯಾ

ಅಹ್ಮದಾಬಾದ್, ಎ. 14: ತಮ್ಮ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಗುಜರಾತ್ ನೀರು ಸರಬರಾಜು ಖಾತೆ ಸಚಿವ ಕನ್ವರ್‌ಜಿ ಬವಾಲಿಯಾ ಅವರನ್ನು ಕೋರಿದ ಮಹಿಳೆಯರಿಗೆ, ಸಚಿವರು "ನೀವು ನನಗೆ ಮತ ಹಾಕಬೇಕಿತ್ತು" ಎಂದು ಹೇಳಿ ವಾಪಾಸು ಕಳುಹಿಸಿದ ಘಟನೆ ಕುರಿತ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೊಬೈಲ್ ಕ್ಯಾಮೆರಾದಲ್ಲಿ ಈ ವೀಡಿಯೊ ಚಿತ್ರೀಕರಿಸಲಾಗಿದ್ದು, ಇದು ವೈರಲ್ ಆದ ಬಳಿಕ ಸ್ಪಷ್ಟನೆ ನೀಡಿರುವ ಸಚಿವರು, "ಅದು ಅನಕ್ಷರಸ್ಥ ಮಹಿಳೆಯ ರಿಂದ ಬಂದ ಪ್ರಶ್ನೆ. ಸ್ಥಳೀಯ ರಾಜಕೀಯದಿಂದ ಪ್ರೇರಿತವಾದದ್ದು" ಎಂದು ಸಬೂಬು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿಗೆ ಕಳೆದ ವರ್ಷ ಸೇರಿದ್ದ ಬವಾಲಿಯಾ ಅವರನ್ನು ಸಂಪುಟ ದರ್ಜೆ ಸಚಿವರನ್ನಾಗಿ ಮಾಡಲಾಗಿತ್ತು. ರಾಜಕೋಟ್ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಜೆಸ್ದಾನ್ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದರು.

ಬಿಜೆಪಿ ಅಭ್ಯರ್ಥಿ ಪರ ಕನೇಸರ ಗ್ರಾಮದಲ್ಲಿ ಪ್ರಚಾರಕ್ಕೆ ಆಗಮಿಸಿದಾಗ ಬಹುತೇಕ ಮಹಿಳೆಯರೇ ಸೇರಿದ್ದ ಉದ್ರಿಕ್ತ ಗ್ರಾಮಸ್ಥರ ಗುಂಪು ಸಚಿವರಿಗೆ ನೀರಿನ ಸಮಸ್ಯೆ ಬಗ್ಗೆ ಅಹವಾಲು ಸಲ್ಲಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, "ಕೇವಲ ಶೇಕಡ 55ರಷ್ಟು ಗ್ರಾಮಸ್ಥರು ಮಾತ್ರ ನನಗೆ ಮತ ಹಾಕಿವೆ" ಎಂದು ಹೇಳಿದರು.

"ಇಡೀ ಜಲಸಂಪನ್ಮೂಲ ಸಚಿವಾಲಯ ನನ್ನ ಕೈಯಲ್ಲಿದೆ. ನಾನು ಸರ್ಕಾರದಲ್ಲಿದ್ದೇನೆ. ಗ್ರಾಮಕ್ಕೆ ನೀರು ಪೂರೈಸಲು ಕೋಟ್ಯಂತರ ರೂಪಾಯಿಗಳನ್ನು ಮಂಜೂರು ಮಾಡಿಸಬಲ್ಲೆ" ಎಂದು ಹೇಳಿದರು. "ನಾನು ಈ ಬಾರಿ ಚುನಾವಣೆಗೆ ಸ್ಪರ್ಧಿಸಿದಾಗ ಶೇಕಡ 55ರಷ್ಟು ಮತಗಳು ಮಾತ್ರ ಬಂದಿವೆ. ನೀವೆಲ್ಲ ನನಗೆ ಯಾಕೆ ಮತ ಹಾಕಿಲ್ಲ" ಎಂದು ಮರು ಪ್ರಶ್ನೆ ಎಸೆದರು.

ಸಚಿವರ ಈ ಹೇಳಿಕೆಯನ್ನು ವರದಿಗಾರರು ಪ್ರಶ್ನಿಸಿದಾಗ ಬವಾಲಿಯಾ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು. ಇದು ಸ್ಥಳೀಯ ರಾಜಕೀಯ ಪ್ರೇರಿತ ಪ್ರಶ್ನೆಯಾಗಿತ್ತು. ಇದು ನಮ್ಮ ಸಚಿವಾಲಯಕ್ಕೆ ಸಂಬಂಧಿಸಿದ ಸಮಸ್ಯೆಯಲ್ಲ; ಪಂಚಾಯತ್ ಗೆ ಸಂಬಂಧಿಸಿದ್ದು ಎನ್ನುವುದನ್ನು ಅವರಿಗೆ ಸ್ಪಷ್ಟ ಪಡಿಸಿದ್ದೇನೆ ಎಂದು ಸಚಿವರು ಸಬೂಬು ಹೇಳಿದರು.

ಕಾಂಗ್ರೆಸ್ ಮುಖಂಡ ಹಾರ್ದಿಕ್ ಪಟೇಲ್ ಸಚಿವರ ಕ್ರಮವನ್ನು ಕಟುವಾಗಿ ಟೀಕಿಸಿದ್ದು, "ಬಿಜೆಪಿಗೆ ಮತ ಹಾಕದಿದ್ದರೆ ಅವರಿಗೆ ಮೂಲ ಸೌಕರ್ಯ ನೀಡುವುದಿಲ್ಲವೇ ? ಇದು ದ್ವೇಷ ರಾಜಕಾರಣ" ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News