ಚುನಾವಣಾ ಅಫಿದಾವಿತ್‌ನಲ್ಲಿ 'ತಪ್ಪು' ಮಾಹಿತಿ ನೀಡಿದ ಇರಾನಿ ವಿರುದ್ಧ ಪ್ರಕರಣ ದಾಖಲು

Update: 2019-04-14 11:45 GMT

 ಲಕ್ನೋ(ಉ.ಪ್ರ.), ಎ.14: ತನ್ನ ಚುನಾವಣಾ ಅಫಿದಾವಿತ್‌ನಲ್ಲಿ 'ತಪ್ಪು' ಮಾಹಿತಿ ನೀಡಿರುವ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಸ್ಮತಿ ಇರಾನಿ ವಿರುದ್ಧ ಪ್ರಕರಣ ದಾಖಲಾಗಿದೆ.

ನಗರದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ತೌಹೀದ್ ಸಿದ್ದಿಕಿ ಪ್ರಕರಣ ದಾಖಲಿಸಿದ್ದಾರೆ.

 ‘‘2014ರ ಲೋಕಸಭಾ ಚುನಾವಣೆ ವೇಳೆ ಚುನಾವಣಾ ಆಯುಕ್ತರಿಗೆ ಸ್ಮತಿ ಇರಾನಿ ಸಲ್ಲಿಸಿರುವ ನಾಮಪತ್ರ ಅಫಿದಾವಿತ್‌ನಲ್ಲಿ 1994ರಲ್ಲಿ ದಿಲ್ಲಿ ವಿಶ್ವವಿದ್ಯಾಲಯದಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪೂರ್ಣಗೊಳಿಸಿದ್ದಾಗಿ ಹೇಳಿದ್ದರು. ಇದೀಗ 2019 ಲೋಕಸಭಾ ಚುನಾವಣೆಗೆ ಸಲ್ಲಿಸಿರುವ ತನ್ನ ನಾಮಪತ್ರದಲ್ಲಿ ತಾನು ಇನ್ನೂ ಪದವಿ ಪೂರ್ಣಗೊಳಿಸಿಲ್ಲ ಎಂದು ನಮೂದಿಸಿದ್ದಾರೆ’’ ಎಂದು ಸಿದ್ದಿಕಿ ತಿಳಿಸಿದ್ದಾರೆ.

  ಕೇಂದ್ರ ಸಚಿವೆ ಇರಾನಿ ಚುನಾವಣಾ ಆಯೋಗಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಸುಳ್ಳು ಮಾಹಿತಿಯಿರುವ ಪ್ರಮಾಣಪತ್ರವನ್ನು ಸಲ್ಲಿಸಿದ್ದು,ಇದು ಸಂಪೂರ್ಣ ನಕಲಿಯಾಗಿರುವಂತೆ ಕಾಣುತ್ತಿದೆ. ಇದೊಂದು ನಂಬಿಕೆದ್ರೋಹದ ನಡೆ. ಈ ಬಗ್ಗೆ ಸರಿಯಾದ ತನಿಖೆ ನಡೆಸಿ, ಇರಾನಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸಿದ್ದಿಕಿ ಆಗ್ರಹಿಸಿದ್ದಾರೆ.

ಕೇಂದ್ರ ಸಚಿವೆ ಇರಾನಿ ಅಮೇಠಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಗುರುವಾರ  ನಾಮಪತ್ರ ಸಲ್ಲಿಸಿದ್ದರು. ಇರಾನಿ ಮೂರು ಬಾರಿಯ ಸಂಸದ ರಾಹುಲ್ ಗಾಂಧಿ ವಿರುದ್ಧ ಸ್ಪರ್ಧಿಸಲಿದ್ದಾರೆ. ರಾಹುಲ್ ಈ ವರ್ಷದ ಚುನಾವಣೆಗೆ ಬುಧವಾರ ನಾಮಪತ್ರ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News