ಕೊಲೋನ್ ಬಾಕ್ಸಿಂಗ್ ವಿಶ್ವಕಪ್: ಮೀನಾಕುಮಾರಿಗೆ ಚಿನ್ನ

Update: 2019-04-14 14:27 GMT

ಕೊಲೋನ್(ಜರ್ಮನಿ), ಎ.14: ಇಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ವಿಶ್ವಕಪ್‌ನಲ್ಲಿ ತನ್ನ ಶ್ರೇಷ್ಠ ಪ್ರದರ್ಶನ ಮುಂದುವರಿಸಿದ ಭಾರತದ ಬಾಕ್ಸಿಂಗ್ ತಾರೆ ಮೀನಾ ಕುಮಾರಿ ೫೪ ಕೆಜಿ ತೂಕ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದಾರೆ.

ಸಾಕ್ಷಿ(57ಕೆಜಿ) ಹಾಗೂ ವಿಲಾವೊ ಬಸುಮಟರಿ(64ಕೆಜಿ)ಫೈನಲ್ ಸುತ್ತಿನಲ್ಲಿ ಸೋಲುವುದರೊಂದಿಗೆ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಪಿಂಕಿ ರಾಣಿ(51ಕೆಜಿ) ಹಾಗೂ ಪರ್ವೀನ್(60ಕೆಜಿ)ತಲಾ ಒಂದು ಕಂಚಿನ ಪದಕವನ್ನು ಜಯಿಸಿದರು. ಈ ಮೂಲಕ ಭಾರತ ಟೂರ್ನಿಯಲ್ಲಿ ಒಟ್ಟು ೫ ಪದಕಗಳನ್ನು ಗೆದ್ದುಕೊಂಡಿದೆ.

2004ರ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಹಾಗೂ ಮೂರು ಬಾರಿ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಜಯಿಸಿರುವ ಮೀನಾ ಫೈನಲ್ ಹಣಾಹಣಿಯಲ್ಲಿ  ಥಾಯ್ಲೆಂಡ್‌ನ ಮಚೈ ಬುನಿಯನಟ್‌ರನ್ನು ಸೋಲಿಸಿದರು. ಮೀನಾ ಈ ಹಿಂದೆ ನಡೆದ ಪ್ರತಿಷ್ಠಿತ ಸ್ಟ್ರಾಜ್‌ಡ್ಜಾ ಕಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಮಣಿಪುರದ ಬಾಕ್ಸರ್ ನೇರವಾಗಿ ಫೈನಲ್‌ಗೆ ತಲುಪಿದ ಕಾರಣ ಟೂರ್ನಮೆಂಟ್‌ನಲ್ಲಿ ಒಂದೇ ಪಂದ್ಯವನ್ನು ಆಡಿದ್ದರು.

ಹಾಲಿ ಯೂತ್ ವರ್ಲ್ಡ್ ಚಾಂಪಿಯನ್ ಸಾಕ್ಷಿ ಮಲಿಕ್ ಎರಡು ಬಾರಿ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಮಿಚಾಲೆ ವಾಲ್ಶ್ ವಿರುದ್ಧ ಸೋತಿದ್ದಾರೆ. ಸಾಕ್ಷಿ ವಿರುದ್ಧ ಪ್ರಾಬಲ್ಯ ಮೆರೆದ ಐರ್ಲೆಂಡ್ ಬಾಕ್ಸರ್ ೫-೦ ಅಂತರದಿಂದ ಜಯ ಸಾಧಿಸಿದರು.

ಇಂಡಿಯಾ ಓಪನ್‌ನಲ್ಲಿ ಚಿನ್ನದ ಪದಕ ಜಯಿಸಿರುವ ಬಸುಮಟರಿ ಚೀನಾದ ಚೆಂಗ್‌ಯು ಯಾಂಗ್ ಎದುರು ಉತ್ತಮ ಹೋರಾಟ ನಡೆಸಿದರು.ಅಂತಿಮವಾಗಿ ಸೋಲುಣ್ಣುವ ಮೂಲಕ ಎರಡನೇ ಸ್ಥಾನ ಪಡೆದರು.

ಕಳೆದ ವರ್ಷ ಹಾಲೆಯಲ್ಲಿ ನಡೆದ ಕೆಮಿಸ್ಟ್ರಿ ಕಪ್‌ನಲ್ಲಿ ಆರು ಪದಕ ಗೆದ್ದ ಹಿನ್ನೆಲೆಯಲ್ಲಿ ಭಾರತ ಈ ಬಾರಿ ಬಾಕ್ಸಿಂಗ್ ಟೂರ್ನಮೆಂಟ್‌ಗೆ 7 ಸದಸ್ಯರನ್ನು ಒಳಗೊಂಡ ತಂಡವನ್ನು ಕಳುಹಿಸಿಕೊಟ್ಟಿದೆ.

ಗೌರವ್ ಸೋಳಂಕಿ(52ಕೆಜಿ) ಹಾಗೂ ಮುಹಮ್ಮದ್ ಹಸ್ಸಮುದ್ದೀನ್(56ಕೆಜಿ)ಕಳೆದ ಆವೃತ್ತಿಯಲ್ಲಿ ಪದಕ ಜಯಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News