ಬಾಂಗ್ಲಾದೇಶದಲ್ಲಿ ಮೃತಪಟ್ಟ ಜಮ್ಮು ಮತ್ತು ಕಾಶ್ಮೀರದ ವಿದ್ಯಾರ್ಥಿನಿ: ಮೃತದೇಹ ತರಲು ಸುಶ್ಮಾ ಸ್ವರಾಜ್ ನೆರವು

Update: 2019-04-14 15:43 GMT

ಹೊಸದಿಲ್ಲಿ,ಎ.14: ಬಾಂಗ್ಲಾದೇಶದಲ್ಲಿ ಸಾವಿಗೀಡಾದ ಜಮ್ಮು ಮತ್ತು ಕಾಶ್ಮೀರ ಮೂಲದ ವಿದ್ಯಾರ್ಥಿಯ ಮೃತದೇಹವನ್ನು ಮರಳಿ ತರಲು ನೆರವಾಗುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಭರವಸೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ವಿದ್ಯಾರ್ಥಿನಿ ಬಾಂಗ್ಲಾದೇಶದ ತಾಹಿರುಲ್ ನಿಸ್ಸ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಖುವರುಲ್ ಐನ್ ಎಂಬಾಕೆ ಶನಿವಾರದಂದು ಮೃತಪಟ್ಟಿದ್ದರು.

ವಿದ್ಯಾರ್ಥಿನಿಯ ಸಾವಿನ ಸುದ್ದಿ ಬರುತ್ತಿದ್ದಂತೆ ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಮೆಹಬೂಬ ಮುಫ್ತಿ ಮತ್ತು ಉಮರ್ ಅಬ್ದುಲ್ಲ ವಿದ್ಯಾರ್ಥಿನಿಯ ಮೃತದೇಹವನ್ನು ಸ್ವದೇಶಕ್ಕೆ ತರಲು ನೆರವಾಗುವಂತೆ ಕೋರಿ ಸುಶ್ಮಾ ಸ್ವರಾಜ್‌ಗೆ ಟ್ವೀಟ್ ಮಾಡಿದ್ದರು.

ಈ ಕುರಿತು ಟ್ವೀಟ್ ಮಾಡಿದ ಡಾಕಾದಲ್ಲಿರುವ ಭಾರತೀಯ ರಾಯಬಾರ ಕಚೇರಿ, ಮೃತಳ ಕುಟುಂಬಸ್ಥರೊಂದಿಗೆ ಅಧಿಕಾರಿಗಳು ಸಂಪರ್ಕದಲ್ಲಿದ್ದು ಮೃತದೇಹವನ್ನು ಸ್ವದೇಶಕ್ಕೆ ಕಳುಹಿಸಲು ಸಕಲ ಸಿದ್ಧತೆಗಳನ್ನು ನಡೆಸುತ್ತಿರುವುದಾಗಿ ತಿಳಿಸಿತ್ತು.

ವಿದೇಶಾಂಗ ವ್ಯವಹಾರಗಳ ಸಚಿವೆ ಸುಶ್ಮಾ ಸ್ವರಾಜ್ ಟ್ವಿಟರ್‌ನಲ್ಲಿ ಸಕ್ರಿಯರಾಗಿದ್ದು ವಿದೇಶಗಳಲ್ಲಿ ಸಂಕಷ್ಟದಲ್ಲಿರುವ ಭಾರತೀಯರ ಮನವಿಗಳಿಗೆ ಸಾಮಾಜಿಕ ಮಾಧ್ಯಮದ ಮೂಲಕ ಸ್ಪಂದಿಸುತ್ತಲೇ ಬಂದಿದ್ದಾರೆ. ಹಾಗಾಗಿ ಅವರು ಟ್ವಿಟರ್‌ನಲ್ಲಿ ಅತ್ಯಂತ ಜನಪ್ರಿಯ ಜನಪ್ರತಿನಿಧಿ ಎಂಬ ಹೊಗಳಿಕೆಯನ್ನೂ ಗಳಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News