ಅಲ್ಪಸಂಖ್ಯಾತರನ್ನು ಬಹಿಷ್ಕರಿಸುವ ಅಜೆಂಡದಿಂದ ಬಿಜೆಪಿ ದೇಶವನ್ನು ವಿಭಜಿಸ ಬಯಸುತ್ತಿದೆ: ಮೆಹಬೂಬಾ ಮುಫ್ತಿ

Update: 2019-04-14 17:59 GMT

ಶ್ರೀನಗರ, ಎ.14: ಮುಸ್ಲಿಮರು ಹಾಗೂ ಅಲ್ಪಸಂಖ್ಯಾತರನ್ನು ಬಹಿಷ್ಕರಿಸುವ ತನ್ನ ಹಾನಿಕಾರಕ ಅಜೆಂಡಾದ ಮೂಲಕ ಬಿಜೆಪಿಯು ದೇಶವನ್ನು ವಿಭಜಿಸ ಬಯಸುತ್ತಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

   ಜಮ್ಮುವಿನ ಕಥುವದಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಕಳೆದ ವಾರ ಕಥುವಾದಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ್ದ ಮೋದಿ, ಅಬ್ದುಲ್ಲಾ ಹಾಗೂ ಮುಫ್ತಿ ಕುಟುಂಬದವರು ಜಮ್ಮು ಕಾಶ್ಮೀರದ ಮೂರು ತಲೆಮಾರಿನ ಜೀವನವನ್ನು ಹಾಳುಗೆಡವಿದ್ದಾರೆ . ಈ ಕುಟುಂಬದವರು ದೇಶವನ್ನು ವಿಭಜಿಸಲು ತಾನು ಬಿಡುವುದಿಲ್ಲ ಎಂದಿದ್ದರು.

ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಪ್ರಧಾನಿಯ ಅಗತ್ಯವಿದೆ ಎಂಬ ಉಮರ್ ಅಬ್ದುಲ್ಲಾರ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ಮೋದಿ, ಈ ಕುಟುಂಬದವರು ತಮ್ಮ ಇಡೀ ಸಂತಾನವನ್ನೇ ರಾಜಕೀಯಕ್ಕೆ ತರಲಿ, ಮೋದಿಯನ್ನು ಎಷ್ಟು ಸಾಧ್ಯವೋ ಅಷ್ಟು ಹೀಯಾಳಿಸಲಿ. ಆದರೆ ಅವರು ದೇಶವನ್ನು ವಿಭಜಿಸಲು ಎಷ್ಟು ಮಾತ್ರಕ್ಕೂ ಸಾಧ್ಯವಾಗದು ಎಂದು ಹೇಳಿದ್ದರು.

 ಚುನಾವಣಾ ಪೂರ್ವದಲ್ಲಿ ರಾಜಕೀಯ ಕುಟುಂಬವನ್ನು ಹಿಗ್ಗಾಮುಗ್ಗ ಝಾಡಿಸುವ ಪ್ರಧಾನಿ ಬಳಿಕ ಆ ಪಕ್ಷದೊಂದಿಗೆ ಮೈತ್ರಿಯ ಮಾತುಕತೆಯಾಡಲು ತನ್ನ ಪ್ರತಿನಿಧಿಗಳನ್ನು ಕಳುಹಿಸುವುದು ಏಕೆ. 1999ರಲ್ಲಿ ನ್ಯಾಷನಲ್ ಕಾನ್ಫರೆನ್ಸ್ ಹಾಗೂ 2015ರಲ್ಲಿ ಪಿಡಿಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದೇಕೆ. ಆಗ ಅವರಿಗೆ 370ನೇ ವಿಧಿಗಿಂತಲೂ ಅಧಿಕಾರದ ವ್ಯಾಮೋಹವೇ ಹೆಚ್ಚಾಯಿತೇ ಎಂದು ಮೆಹಬೂಬಾ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News