ಏಶ್ಯನ್ ಚಾಂಪಿಯನ್‌ಶಿಪ್‌ಗೆ ನೀರಜ್ ಚೋಪ್ರಾ ಅಲಭ್ಯ

Update: 2019-04-15 01:43 GMT

ಪಟಿಯಾಲಾ , ಎ.14: ಮೊಣಕೈ ನೋವಿಗೆ ಒಳಗಾಗಿರುವ ಕಾಮನ್‌ವೆಲ್ತ್, ಏಶ್ಯನ್ ಗೇಮ್ಸ್ ಚಾಂಪಿಯನ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಎ.21ರಿಂದ ದೋಹಾದಲ್ಲಿ ನಡೆಯಲಿರುವ ಏಶ್ಯನ್ ಚಾಂಪಿಯನ್‌ಶಿಪ್‌ಗೆ ಅಲಭ್ಯರಾಗಿದ್ದಾರೆ.

ಹಾಲಿ ಚಾಂಪಿಯನ್ ಆಗಿರುವ ಚೋಪ್ರಾ ತಮ್ಮ ಕೋಚ್ ದ.ಆಫ್ರಿಕದ ವುವೆ ಹಾನ್ ಅವರಿಂದ ತರಬೇತಿಗೆ ಒಳಗಾಗಿ ಇತ್ತೀಚೆಗೆ ಕ್ರೀಡೆಗೆ ಮರಳಿದ್ದರು ಶುಕ್ರವಾರ ಜಾವೆಲಿನ್ ಎಸೆಯುವ ಸಂದರ್ಭದಲ್ಲಿ ನೋವಿಗೆ ಒಳಗಾಗಿದ್ದ ಕಾರಣ ಅರ್ಧದಲ್ಲೇ ತರಬೇತಿ ನಿಲ್ಲಿಸಿದ್ದರು. ‘‘ಇದೊಂದು ಗಂಭೀರ ಸಮಸ್ಯೆಯೇನಲ್ಲ. ನೀರಜ್ ಒಂದು ವಾರದಲ್ಲೇ ಅಂಗಣಕ್ಕೆ ಮರಳಬೇಕಿತ್ತು. ಆದರೆ ನಾವು ಯಾವುದೇ ಅಪಾಯ ತಂದುಕೊಳ್ಳಲು ಬಯಸುವುದಿಲ್ಲ. ಅವರನ್ನು ವಿಶ್ವ ಚಾಂಪಿಯನ್‌ಶಿಪ್‌ಗೆ ಉಳಿಸಿಕೊಳ್ಳಬೇಕಿದೆ. ತಾನು ಸಂಪೂರ್ಣ ಫಿಟ್ ಆಗಿಲ್ಲವೆಂದು ನೀರಜ್ ಹೇಳಿದ್ದಾರೆ. ಹಾಗಾಗಿ ನಾವು ಅವರನ್ನು ಏಶ್ಯನ್ ಚಾಂಪಿಯನ್‌ಶಿಪ್‌ಗೆ ಕಳುಹಿಸದಿರಲು ನಿರ್ಧರಿಸಿದ್ದೇವೆ’’ ಎಂದು ಉಪ ಮುಖ್ಯ ಕೋಚ್ ರಾಧಾಕೃಷ್ಣನ್ ನಾಯರ್ ಪತ್ರಿಕೆಯೊಂದಕ್ಕೆ ಹೇಳಿದ್ದಾರೆ.

 ಗಾಯದ ಸಮಸ್ಯೆಯಿಂದ ಏಶ್ಯನ್ ಚಾಂಪಿಯನ್‌ಶಿಪ್ ತಪ್ಪಿಸಿಕೊಳ್ಳುತ್ತಿರುವವರ ಸಂಖ್ಯೆ ಬೆಳೆಯುತ್ತಿದ್ದು ನೀರಜ್ ಹೊಸ ಸೇರ್ಪಡೆ. ಏಶ್ಯನ್ ಗೇಮ್ಸ್ 800 ಮೀ. ಓಟದ ಬಂಗಾರದ ಪದಕ ವಿಜೇತ ಮನ್‌ಜಿತ್ ಸಿಂಗ್ ಹಾಗೂ ಧರುಣ್ ಅಯ್ಯಸ್ವಾಮಿ ಕೂಡ ಗಾಯದ ಕಾರಣ ಟೂರ್ನಿಯಿಂದ ಹೊರಗುಳಿದಿದ್ದಾರೆ. ಟೈಪಾಯಿಡ್‌ನಿಂದ ಚೇತರಿಸಿಕೊಳ್ಳುತ್ತಿರುವ ಸ್ಟೀಪಲ್‌ಚೇಸರ್ ಸುಧಾಸಿಂಗ್ ಕೂಡ ಟೂರ್ನಿಗೆ ಲಭ್ಯರಿಲ್ಲ. ಮೂಳೆ ಮುರಿತಕ್ಕೆ ಒಳಗಾಗಿರುವ ತಮಿಳುನಾಡಿನ ಅಯ್ಯಸ್ವಾಮಿ ಚೇತರಿಸಿಕೊಳ್ಳಲು ಇನ್ನೂ ಒಂದು ತಿಂಗಳು ಸಮಯ ಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News