ಪ್ರಭಾತ್ ಕಾಂಪ್ಲೆಕ್ಸ್‌ನಲ್ಲಿ ನಕಲಿ ಮತದಾರ ಗುರುತಿನ ಚೀಟಿ ಮುದ್ರಣ ಮಾಡುತ್ತಿರಲಿಲ್ಲ: ಸಂಜೀವ್ ಕುಮಾರ್ ಸ್ಪಷ್ಟನೆ

Update: 2019-04-16 17:46 GMT

ಬೆಂಗಳೂರು, ಎ.16: ಪ್ರಭಾತ್ ಕಾಂಪ್ಲೆಕ್ಸ್‌ನಲ್ಲಿ ನಕಲಿ ಮತದಾರ ಗುರುತಿನ ಚೀಟಿಯನ್ನು ಮುದ್ರಣ ಮಾಡುತ್ತಿರಲಿಲ್ಲ. ಅಲ್ಲಿ, ಮತದಾರರ ಮತದಾನ ಚೀಟಿಯನ್ನು ಮುದ್ರಣ ಮಾಡುತ್ತಿದ್ದರು ಎಂದು ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. 

ಮಂಗಳವಾರ ನಗರದ ವಾರ್ತಾ ಭವನದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಭಾತ್ ಕಾಂಪ್ಲೆಕ್ಸ್‌ನಲ್ಲಿ ನಕಲಿ ಮತದಾರ ಗುರುತಿನ ಚೀಟಿ ತಯಾರಿಸುತ್ತಿದ್ದರು ಎಂಬ ಆರೋಪದ ಹಿನ್ನೆಲೆಯಲ್ಲಿ ಫ್ಲೈಯಿಂಗ್ ಸ್ಕ್ವಾಡ್ ದೇವರಾಜು ಹಾಗೂ ತಂಡದವರಿಂದ ತನಿಖೆ ಮಾಡಲಾಗಿದೆ. ಅವರು ವರದಿ ಸಲ್ಲಿಸಿದ್ದು, ಅಲ್ಲಿ ಯಾವುದೇ ನಕಲಿ ಚೀಟಿಗಳ ಮುದ್ರಣ ನಡೆಯುತ್ತಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಎಂದರು.

ಮತದಾರರ ಗುರುತಿನ ಚೀಟಿಯನ್ನು ವಶದಲ್ಲಿಟ್ಟುಕೊಳ್ಳುವುದು ಅಪರಾಧವಾಗುತ್ತದೆ. ಆದರೆ, ಇಲ್ಲಿ ಮತದಾನ ಚೀಟಿಯನ್ನು ಮುದ್ರಣ ಮಾಡಲಾಗುತ್ತಿತ್ತು. ಅದರ ಮೇಲೆ ಒಂದು ಪಕ್ಷದ ಹಾಗೂ ಅಭ್ಯರ್ಥಿಯ ಭಾವಚಿತ್ರವನ್ನು ಮುದ್ರಣ ಮಾಡಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿ, ಎಫ್‌ಐಆರ್ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಕರಣ ನಡೆದ ಸ್ಥಳದಲ್ಲಿ 10 ಸಿಪಿಯು, 8 ಕೀಬೋರ್ಡ್, 1 ಎಚ್‌ಪಿ ಸ್ಕಾನರ್, 3 ಲ್ಯಾಪ್‌ಟಾಪ್, 270 ಹ್ಯಾಂಡ್ ಪ್ರಿಂಟರ್ಸ್‌, 45 ಖಾಲಿ ಪಂಚಸ್, 400 ಚಾರ್ಜರ್ಸ್‌, 50 ಬ್ಯಾಟರಿ, 450 ಪೇಪರ್ ರೋಲ್, 88 ಎಲೆಕ್ಟ್ರಿಕಲ್ ರೋಲ್ಸ್ ಸೇರಿದಂತೆ ಮತ್ತಿತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಸಿದ್ಧತೆ ಪೂರ್ಣ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ. ಎಲ್ಲ ಹಂತದ ಮತಕೇಂದ್ರದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಇವಿಎಂ, ವಿವಿಫ್ಯಾಟ್‌ಗಳ ಭದ್ರತೆ ಪರಿಶೀಲನೆ ಮಾಡಲಾಗಿದೆ ಎಂದು ಅವರು ಹೇಳಿದರು.

ಮದ್ಯ ಮಾರಾಟ ನಿಷೇಧ: ಮುಂದಿನ 48 ಗಂಟೆಗಳ ಕಾಲ 14 ಲೋಕಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಚುನಾವಣೆ ನಡೆಯುವ 100 ಮೀಟರ್ ಅಂತರದಲ್ಲಿ ಪ್ರಚಾರ ಮಾಡುವುದಕ್ಕೆ ನಿಷೇಧ ಹೇರಲಾಗಿದೆ. ಇನ್ನುಳಿದಂತೆ ಅಭ್ಯರ್ಥಿಗಳ ಮೇಲಿನ ಕ್ರಿಮಿನಲ್ ಪ್ರಕರಣಗಳ ವಿವರ ಚುನಾವಣಾ ಪ್ರಕ್ರಿಯೆ ಮುಕ್ತಾಯವಾದ 30 ದಿನಗಳೊಳಗೆ ಚುನಾವಣಾ ಆಯೋಗಕ್ಕೆ ವಿವರ ಸಲ್ಲಿಸಬೇಕು ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News