ಚುನಾವಣಾ ಆಯೋಗದ ವಿಶ್ವಾಸಾರ್ಹತೆಗೇ ಅಪಾಯ?

Update: 2019-04-16 18:33 GMT

ಚುನಾವಣಾ ಸಮಯದಲ್ಲಿ ಒಂದು ಟಿವಿ ಚಾನಲ್ ಆರಂಭಿಸುವ ಮೂಲಕ ಭಾರತದ ಚುನಾವಣಾ ಮತ್ತು ಪ್ರಸಾರ ಕಾನೂನುಗಳಲ್ಲಿರುವ ಲೋಪಗಳನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಬಿಜೆಪಿಯ ಪ್ರಯತ್ನಗಳು ಅದಕ್ಕೆ ತಿರುಗುಬಾಣವಾಗಬಹುದು; ಚುನಾವಣಾ ಆಯೋಗವು ನಮೋ ಟಿವಿಯನ್ನು ಒಂದು ರಾಜಕೀಯ ಪ್ರಸಾರವೆಂದು ಹೇಳಿರುವುದು ಅದರ ಉನ್ನತ ನಾಯಕರ ವಿರುದ್ಧ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವ ಸಾಧ್ಯತೆಯನ್ನು ಉಜ್ವಲಗೊಳಿಸಿದೆ.

ಚುನಾವಣೆಗೆ ಸಂಬಂಧಿಸಿದ ಪ್ರಚಾರಕ್ಕಾಗಿ ಟಿವಿ ಬಳಸಿಕೊಳ್ಳುವುದಕ್ಕೆ ಎರಡು ರೀತಿಯ ನಿಯಮಗಳಿವೆ; ಮೊದಲನೆಯದಾಗಿ, 2004 ರ ಚುನಾವಣಾ ಆಯೋಗದ ಒಂದು ಆಜ್ಞೆಯ ಪ್ರಕಾರ ಎಲ್ಲ ಜಾಹೀರಾತುಗಳನ್ನು ವೀಕ್ಷಕ ಸಮಿತಿಯೊಂದು ಪರಿಶೀಲಿಸಿದ ಬಳಿಕವಷ್ಟೆ ಅವುಗಳನ್ನು ವಿದ್ಯುನ್ಮಾನ ಮಾಧ್ಯಮದಲ್ಲಿ ಪ್ರಸಾರ ಮಾಡಬಹುದು. ಎರಡನೆಯದಾಗಿ, ಚುನಾವಣೆ ಕೊನೆಗೊಳ್ಳುವ 48 ಗಂಟೆಗಳ ಮೊದಲು ಯಾವುದೇ ಚುನಾವಣಾ ವಿಷಯವನ್ನು ಪ್ರಸಾರ ಮಾಡದಂತೆ 1951ರ ಜನತಾ ಪ್ರಾತಿನಿಧ್ಯ ಕಾಯಿದೆ ಕಟ್ಟುನಿಟ್ಟಾದ ನಿಷೇಧ ಹೇರಿದೆ.

ಚುನಾವಣಾ ಆಯೋಗವು ಪರಿಶೀಲನಾ ಸಮಿತಿಗೆ ಸಲ್ಲಿಸದೆ ಇರುವ ಯಾವುದೇ ಜಾಹೀರಾತು ವಿಷಯವನ್ನು ರಾಜಕೀಯ ಪಕ್ಷಗಳು ಬಳಸದಂತೆ ತಡೆಯುವ ಅಧಿಕಾರ ಚುನಾವಣಾ ಆಯೋಗಕ್ಕೆ ಇದೆ. ಅಲ್ಲದೆ, ಎರಡನೆಯ ನಿಯಮ (48 ಗಂಟೆಗಳ ನಿಷೇಧಾಜ್ಞೆ) ಇದಕ್ಕಿಂತ ಹೆಚ್ಚು ಗಂಭೀರವಾದ ವಿಷಯ ಮತ್ತು ಒಂದು ಕ್ರಿಮಿನಲ್ ಅಪರಾಧ. ಈ ಅಪರಾಧ ಎಸಗುವ ವ್ಯಕ್ತಿಗೆ ಎರಡು ವರ್ಷಗಳ ಜೈಲುಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದಾಗಿದೆ. ಮಾರ್ಚ್ 31ರಂದು ಬಿಜೆಪಿ ತನ್ನ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಯಶಸ್ಸುಗಳನ್ನು ಪ್ರೊಮೋಟ್ ಮಾಡುವುದಕ್ಕಾಗಿ 24 ಗಂಟೆಗಳ ‘ನಮೋ ಟಿವಿ’ ಎಂಬ ಒಂದು ಚಾನೆಲನ್ನು ಆರಂಭಿಸಿತು. ಅದರ ನಿಜವಾದ ಮಾಲಕತ್ವ ನರೇಂದ್ರ ಮೋದಿಗೆ ಸೇರಿದೆ. ನಮೋ ಟಿವಿ ಎಂಬುದು ನಮೋ ಆ್ಯಪ್‌ನ ಒಂದು ಫೀಚರ್ ಮತ್ತು ಇದನ್ನು ಬಿಜೆಪಿಯ ಐಟಿ ಸೆಲ್ ನಿರ್ವಹಿಸುತ್ತಿದೆ. ಎಪ್ರಿಲ್ 11ರ ರಾತ್ರಿ ಚುನಾವಣಾ ಆಯೋಗವು, ನಮೋ ಟಿವಿಯಲ್ಲಿ ಪ್ರಸಾರವಾಗುವ ವಿಷಯಗಳು ರಾಜಕೀಯ ಜಾಹೀರಾತುಗಳನ್ನು ಮತ್ತು ರಾಜಕೀಯ ಪ್ರಸಾರ ಸಾಮಗ್ರಿಗಳೆಂದು ಒಪ್ಪಿಕೊಂಡಿತು. ಆದರೆ, ಮೊದಲ ಹಂತದ ಚುನಾವಣೆಗಳು ನಡೆಯುವುದಕ್ಕಿಂತ 48ಗಂಟೆಗಳ ಮೊದಲಿನ ಅವಧಿಯಲ್ಲಿ ಕೂಡ ನಮೋ ಟಿವಿ ರಾಜಕೀಯ ಪ್ರಚಾರ ಸಾಮಗ್ರಿಯನ್ನು ಪ್ರಸಾರ ಮಾಡಿದ ಬಗ್ಗೆ ಚುನಾವಣಾ ಆಯೋಗ ಸಂಪೂರ್ಣ ವೌನತಾಳಿದೆ. ಹೀಗೆ ಪ್ರಚಾರ ಸಾಮಗ್ರಿಯನ್ನು ಪ್ರಸಾರ ಮಾಡುವ ಮೂಲಕ ಬಿಜೆಪಿ ಕಾನೂನನ್ನು ಉಲ್ಲಂಘಿಸಿದ ಅಪರಾಧ ಎಸಗಿದೆ. ಆರ್‌ಪಿ ಕಾಯ್ದೆಯ 126ನೇ ಸೆಕ್ಷನ್ ಪ್ರಕಾರ ಅದು ಈಗ ಅಪರಾಧಿಯಾಗುತ್ತದೆ.

  ಈ ಸೆಕ್ಷನ್‌ನ ನಿಯಮಗಳ ಪ್ರಕಾರ ನಮೋ ಟಿವಿ ಎಪ್ರಿಲ್ 9ರ ಸಂಜೆ 5ರಿಂದ ತನ್ನ ಪ್ರಸಾರವನ್ನು ನಿಲ್ಲಿಸಬೇಕಾಗಿತ್ತು. ಆದರೆ ಗುರುವಾರ ಚುನಾವಣೆ ನಡೆಯಲಿದ್ದ 91 ಕ್ಷೇತ್ರಗಳಲ್ಲಿ ವೀಕ್ಷಕರನ್ನು ಸಂದರ್ಶಿಸುತ್ತ ಅದು ಮೋದಿ ಹಾಗೂ ಬಿಜೆಪಿಯ ಚುನಾವಣಾ ವಿಷಯಗಳನ್ನು, ಸಾಮಗ್ರಿಗಳನ್ನು ಪ್ರಸಾರಮಾಡುತ್ತಲೆ ಇತ್ತು.
 ಎಪ್ರಿಲ್ 12ರ ಬೆಳಗ್ಗೆ ಕೂಡ ನಮೋ ಟಿವಿಯ ಪ್ರಸಾರ ಮುಂದುವರಿದಿತ್ತು. ಮಾನಿಟರ್ ಕಮಿಟಿ ಅದು ಪ್ರಸಾರ ಮಾಡುವ ವಿಷಯವನ್ನು ಪರಿಶೀಲಿಸಿ ವಿಷಯಗಳ ಪ್ರಸಾರಕ್ಕೆ ಪ್ರಮಾಣ ಪತ್ರ ನೀಡಿರಲಿಲ್ಲ.

ಎಪ್ರಿಲ್ 11ರ ಬೆಳಿಗ್ಗೆ ದಿಲ್ಲಿಯ ಮುಖ್ಯ ಚುನಾವಣಾಧಿಕಾರಿ ಆ ಪ್ರಸಾರವನ್ನು ಸಮರ್ಥಿಸಿ ಹೇಳಿಕೆ ನೀಡಿದರು: ‘‘ನಮೋ, ಟಿವಿ ಅದಾಗಲೆ ಪಬ್ಲಿಕ್ ಡೊಮೈನ್‌ನಲ್ಲಿರುವ ಮೋದಿಯವರ ಭಾಷಣಗಳನ್ನು ಮತ್ತು ಸಂದರ್ಶನಗಳನ್ನು ಪ್ರಸಾರಮಾಡುತ್ತಿರುವುದರಿಂದ ಅವುಗಳು ಜಾಹೀರಾತು ಗಳಾಗುವುದಿಲ್ಲ: ಅವುಗಳು ಜಾಹೀರಾತುಗಳಲ್ಲ; ಹಾಗಾಗಿ ಅವುಗಳಿಗೆ ಪ್ರಸಾರ ಪೂರ್ವ ಪ್ರಮಾಣೀಕರಣದ (ಪ್ರೀ-ಸರ್ಟಿಫಿಕೇಶನ್‌ನ) ಅವಶ್ಯಕತೆ ಇಲ್ಲ.’’ ತನ್ನ ಚಾನೆಲನ್ನು ಪ್ರಸಾರ ಮಾಡಲು ಡಿಟಿಎಚ್ ಆಪರೇಟರ್‌ಗಳಿಗೆ ಬಿಜೆಪಿ ಹಣ ಪಾವತಿ ಮಾಡುತ್ತಿದೆಯಾದರೂ ಸಿಇಒ ಆ ಪ್ರಸಾರವನ್ನು ಸಮರ್ಥಿಸಿ ಹೀಗೆ ಮಾತಾಡಿದರು.
 ಈಗ ಚುನಾವಣಾ ಆಯೋಗ ದಿಲ್ಲಿಯ ಸಿಇಒರವರ ವಾದವನ್ನು ತಳ್ಳಿಹಾಕಿದೆ ಮತ್ತು ಪ್ರಿ-ಸರ್ಟಿಫಿಕೇಶನ್‌ನ ಹೊರತಾಗಿ ಯಾವುದೇ ವಿಷಯವನ್ನು ಪ್ರಸಾರ ಮಾಡಕೂಡದು ಎಂದು ತಾಕೀತು ಮಾಡಿದೆ. ಆದರೂ ಕೂಡ ಅದು ನಮೋ ಟಿವಿ ಮತ್ತು ಅದರ ಮಾಲಕ/ಫಲಾನುಭವಿಯ ವಿರುದ್ಧ ಆರ್‌ಪಿ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಕ್ರಿಮಿನಲ್ ಮೊಕದ್ದಮೆಯೊಂದನ್ನು ದಾಖಲಿಸಿಲ್ಲ.

ಚುನಾವಣಾ ಆಯೋಗವು ಸಾಂವಿಧಾನಿಕವಾದ ಕಾನೂನನ್ನು ಅದರ ತಾರ್ಕಿಕ ಅಂತ್ಯಕ್ಕೆ ಒಯ್ಯುವುದಾದಲ್ಲಿ ಕಾನೂನನ್ನು ಸಾರಾಸಗಟಾಗಿ ಉಲ್ಲಂಘಿಸಿದವರ ವಿರುದ್ಧ ಅದು ಕ್ರಿಮಿನಲ್ ಆಪಾದನೆಗಳನ್ನು ಹೊರಿಸಿ ಕ್ರಿಮಿನಲ್ ಮೊಕದ್ದಮೆಯೊಂದನ್ನು ದಾಖಲಿಸಲೇಬೇಕಾಗುತ್ತದೆ. ಚುನಾವಣಾ ಆಯೋಗವು ಮೋದಿ ಅಥವಾ ಬಜೆಪಿ ಅಧ್ಯಕ್ಷ ಅಮಿತ್‌ಶಾ ಅಥವಾ ಇನ್ಯಾರೋ ಮೂರನೇ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಜರುಗಿಸಲು ಮುಂದಾಗುತ್ತದೋ? ಇಲ್ಲವೋ? ಎಂಬುದನ್ನು ಕಾದು ನೋಡಬೇಕಾಗಿದೆ. ಈಗ ಚುನಾವಣಾ ಆಯೋಗದ, ಮೂವರು ಚುನಾವಣಾ ಆಯುಕ್ತರು ಮತ್ತು ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೇ ಅಪಾಯ ಒದಗಿದೆ.


ಕೃಪೆ: thewire

Writer - ಸಿದ್ಧಾರ್ಥ ವರದರಾಜನ್

contributor

Editor - ಸಿದ್ಧಾರ್ಥ ವರದರಾಜನ್

contributor

Similar News