ಕೈ ತಪ್ಪಿದ ವಿಶ್ವಕಪ್ ಟಿಕೆಟ್: ಅಂಬಟಿ ರಾಯುಡು ಬೇಸರ

Update: 2019-04-17 13:02 GMT

ಹೊಸದಿಲ್ಲಿ, ಎ.16: ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಆಂಧ್ರಪ್ರದೇಶದ ಆಟಗಾರ ಅಂಬಟಿ ರಾಯುಡು ಟ್ವಿಟರ್‌ನ ಮೂಲಕ ತನ್ನ ಬೇಸರ ವ್ಯಕ್ತಪಡಿಸಿದ್ದು, ‘‘ವಿಶ್ವಕಪ್ ಪಂದ್ಯ ವೀಕ್ಷಿಸಲು ಈಗಷ್ಟೇ ಮೂರನೇ ಹೊಸ ಗ್ಲಾಸ್‌ಗೆ ಆರ್ಡರ್ ಮಾಡಿದ್ದೇನೆ’’ ಎಂದು ಟ್ವೀಟ್ ಮಾಡಿದ್ದಾರೆ.

33ರ ಹರೆಯದ ರಾಯುಡುರನ್ನು ಸ್ಪರ್ಧೆಯಲ್ಲಿ ಹಿಂದಿಕ್ಕಿದ ಚೆನ್ನೈನ ಆಲ್‌ರೌಂಡರ್ ವಿಜಯ ಶಂಕರ್ ಭಾರತದ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

‘‘ನಾವು ರಾಯುಡುವಿಗೆ ಕೆಲವು ಅವಕಾಶ ನೀಡಿದ್ದೆವು. ಆದರೆ, ವಿಜಯ ಶಂಕರ್‌ರಿಂದ ನಮಗೆ ಮೂರು ವಿಧದ ಲಾಭವಿದೆ. ಅವರು ಬ್ಯಾಟಿಂಗ್ ಮಾಡಬಲ್ಲರು. ಮೋಡಕವಿದ ವಾತಾವರಣವಿದ್ದರೆ ಬೌಲಿಂಗ್ ಮಾಡಬಲ್ಲರು ಹಾಗೂ ಅವರು ಉತ್ತಮ ಫೀಲ್ಡರ್ ಕೂಡ ಹೌದು. ನಾವು ವಿಜಯ ಶಂಕರ್4ನೇ ಕ್ರಮಾಂಕದಲ್ಲಿರಲು ಬಯಸುತ್ತೇವೆ’’ ಎಂದು ಆಯ್ಕೆ ಸಮಿತಿಯ ಮುಖ್ಯಸ್ಥ ಎಂಎಸ್‌ಕೆ ಪ್ರಸಾದ್ ಹೇಳಿದ್ದಾರೆ.

ಪ್ರಸಾದ್ ಅಭಿಪ್ರಾಯಕ್ಕೆ ಧ್ವನಿಗೂಡಿಸಿದ ಭಾರತದ ಮಾಜಿ ನಾಯಕ ಸುನೀಲ್ ಗವಾಸ್ಕರ್, ಶಂಕರ್ ಉತ್ತಮ ಕ್ರಿಕೆಟಿಗ ಎಂದರು

 ಮತ್ತೊಂದೆಡೆ ಸೀಮಿತ ಓವರ್ ಕ್ರಿಕೆಟ್‌ಗೆ ಹೆಚ್ಚು ಗಮನ ನೀಡುತ್ತಿರುವ ರಾಯುಡು ಸ್ಥಿರ ಪ್ರದರ್ಶನ ನೀಡಲು ಪರದಾಡುತ್ತಿದ್ದಾರೆ. ಸ್ವದೇಶದಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಪಂದ್ಯದಲ್ಲಿ ಮೂರು ಬಾರಿ ರಾಯುಡು ಕಳಪೆ ಪ್ರದರ್ಶನ ನೀಡಿದ್ದರು. ಅನುಭವಿ ಆಟಗಾರನಾಗಿದ್ದರೂ ಐಪಿಎಲ್‌ನಲ್ಲಿ ಆಡುತ್ತಿಲ್ಲ. 55 ಪಂದ್ಯಗಳಲ್ಲಿ 47.05ರ ಸರಾಸರಿಯಲ್ಲಿ ಬ್ಯಾಟಿಂಗ್ ಮಾಡಿರುವ ರಾಯುಡುವಿಗೆ ಆಸೀಸ್ ವಿರುದ್ಧ 3 ಪಂದ್ಯಗಳ ವೈಫಲ್ಯ ಮುಳುವಾಗಿ ಪರಿಣಮಿಸಿದೆ.

ಕಳೆದ ವರ್ಷ ಏಶ್ಯಕಪ್‌ನ ಬಳಿಕ ರಾಯುಡು 4ನೇ ಕ್ರಮಾಂಕದಲ್ಲಿ ಆಡುತ್ತಿದ್ದರು. ಏಶ್ಯಕಪ್ ಹಾಗೂ ಆಸೀಸ್ ವಿರುದ್ಧ ಸರಣಿಯ ಮಧ್ಯೆ 1 ಶತಕ ಹಾಗೂ ನಾಲ್ಕು ಅರ್ಧಶತಕಗಳನ್ನು ಸಿಡಿಸಿದ್ದಾರೆ. ನ್ಯೂಝಿಲೆಂಡ್ ವಿರುದ್ಧ ಈ ವರ್ಷ ನಡೆದ ಪಂದ್ಯದಲ್ಲಿ ಒಂದು ಹಂತದಲ್ಲಿ ಸಂಕಷ್ಟದಲ್ಲಿದ್ದ ಭಾರತಕ್ಕೆ ಆಸರೆಯಾಗಿದ್ದ ರಾಯುಡು 113 ಎಸೆತಗಳಲ್ಲಿ 90 ರನ್ ಗಳಿಸಿ ಗೆಲುವಿನ ದಡ ಸೇರಿಸಿದ್ದರು. ಆಸ್ಟ್ರೇಲಿಯ ಪ್ರವಾಸದ ವೇಳೆ ರಾಯುಡು ಕೇವಲ 2 ಪಂದ್ಯ ಆಡಿದ್ದರು. ನ್ಯೂಝಿಲೆಂಡ್ ಪ್ರವಾಸದಲ್ಲಿ ಭಾರತದ ಪರ ಗರಿಷ್ಠ ರನ್ ಗಳಿಸಿದ ಸಾಧನೆ ಮಾಡಿದ್ದರು. ಕಿವೀಸ್ ನಾಡಿನಲ್ಲಿ 5 ಇನಿಂಗ್ಸ್ ಗಳಲ್ಲಿ 190 ರನ್ ಗಳಿಸಿದ್ದರು. ಆದರೆ ಈ ಪ್ರದರ್ಶನ ಅವರಿಗೆ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಇಂಗ್ಲೆಂಡ್‌ಗೆ ತೆರಳಲು ಸಾಕಾಗಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News