ಚೆನ್ನೈ ಸೂಪರ್ ಕಿಂಗ್ಸ್ ಎದುರು ಹೈದರಾಬಾದ್ ಜಯಭೇರಿ

Update: 2019-04-17 18:42 GMT

ಹೈದರಾಬಾದ್, ಎ.17: ರಶೀದ್ ಖಾನ್‌ರ ಪರಿಣಾಮಕಾರಿ ಬೌಲಿಂಗ್, ಜಾನಿ ಬೈರ್‌ಸ್ಟೋ  ಹಾಗೂ ಡೇವಿಡ್ ವಾರ್ನರ್ ಅವರ ಜವಾಬ್ದಾರಿಯುತ ಅರ್ಧಶತಕಗಳ ಬಲದಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ೩೩ನೇ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದೆ.

ಬುಧವಾರ 133 ರನ್‌ಗಳ ಗುರಿ ಬೆನ್ನಟ್ಟಿದ್ದ ಹೈದರಾಬಾದ್ 16.5 ಓವರ್‌ಗಳಲ್ಲಿ 137 ರನ್ ಗಳಿಸಿ ಗೆಲುವಿನ ನಗೆ ಬೀರಿತು.

ವಿಜೇತ ತಂಡಕ್ಕೆ ವಾರ್ನರ್ (50, 25 ಎಸೆತ, 10 ಬೌಂಡರಿ) ಹಾಗೂ ಬೈರ್‌ಸ್ಟೋ (ಅಜೇಯ 61, 44 ಎಸೆತ, 3 ಬೌಂಡರಿ, 3ಸಿಕ್ಸರ್) ಮೊದಲ ವಿಕೆಟ್‌ಗೆ 66 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಅರ್ಧಶತಕ ಗಳಿಸಿದ ತಕ್ಷಣ ವಾರ್ನರ್  ಅವರು ದೀಪಕ್ ಚಹಾರ್‌ಗೆ ವಿಕೆಟ್ ಒಪ್ಪಿಸಿದರು. ನಾಯಕ ಕೇನ್ ವಿಲಿಯಮ್ಸನ್ (3) ಹಾಗೂ ವಿಜಯಶಂಕರ್ (7) ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದರು. ಇಮ್ರಾನ್ ತಾಹಿರ್ ಬೌಲಿಂಗ್‌ನಲ್ಲಿ ಇವರಿಬ್ಬರೂ ವಿಕೆಟ್ ಒಪ್ಪಿಸಿದರು. ದೀಪಕ್ ಹೂಡಾ (13) ಕೆಲಹೊತ್ತು ಬೈರ್‌ಸ್ಟೋಗೆ ಸಾಥ್ ನೀಡಿದರು. ಅಂತಿಮವಾಗಿ ಬೈರ್‌ಸ್ಟೋ ಸಿಕ್ಸರ್ ಮೂಲಕ ಹೈದರಾಬಾದ್ ಗೆಲುವನ್ನು ಖಚಿತಪಡಿಸಿದರು.

ಇದಕ್ಕೂ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಚೆನ್ನೈ ನಿಗದಿತ ೨೦ ಓವರ್‌ಗಳಲ್ಲಿ ೫ ವಿಕೆಟ್ ನಷ್ಟಕ್ಕೆ ೧೩೨ ರನ್ ಗಳಿಸಿತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಶೇನ್ ವಾಟ್ಸನ್ (31, 29 ಎಸೆತ, 4 ಬೌಂಡರಿ) ಹಾಗೂ ಫಾಫ್ ಡು ಪ್ಲೆಸಿಸ್ (45, 31 ಎಸೆತ, 3 ಬೌಂಡರಿ, 3 ಸಿಕ್ಸರ್ ) ಮೊದಲ ವಿಕೆಟ್ ಜೊತೆಯಾಟದಲ್ಲಿ 79
ರನ್ ಗಳಿಸಿದರು. ಈ ವೇಳೆ ವಾಟ್ಸನ್ ಶಾಬಾಝ್ ನದೀಮ್ ಎಸೆತದಲ್ಲಿ ಬೌಲ್ಡ್ ಆದರು.

ಈ ಹಂತದಲ್ಲಿ ಡು ಫ್ಲೆಸಿಸ್ ಅವರು ವಿಜಯಶಂಕರ್‌ರ ಬೌಲಿಂಗ್ ವೇಗಕ್ಕೆ ಬಲಿಯಾದರು.  ಆ ಬಳಿಕ ಜೊತೆಯಾದ ಸುರೇಶ್ ರೈನಾ (13, 13 ಎಸೆತ, 2 ಬೌಂಡರಿ) ಹಾಗೂ ಅಂಬಟಿ ರಾಯುಡು (25, 21 ಎಸೆತ, 2 ಬೌಂಡರಿ) ಜೋಡಿಯು ಎಚ್ಚರಿಕೆಯಿಂದ ರನ್ ಜಮೆ ಮಾಡುತ್ತ ಸಾಗಿದರೂ ಮೂರನೇ ವಿಕೆಟ್‌ಗೆ ಕೇವಲ 16 ರನ್ ಸೇರಿಸಿ ಬೇರ್ಪಟ್ಟಿತು. ರೈನಾ ಅವರು ಲೆಗ್‌ಸ್ಪಿನ್ನರ್ ರಶೀದ್ ಖಾನ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಅದೇ ಓವರ್‌ನಲ್ಲಿ ಕೇದಾರ್ ಜಾಧವ್ (1) ವಿಕೆಟ್‌ನ್ನು ರಶೀದ್ ಕಿತ್ತರು. ಈ ವೇಳೆ ತಂಡದ ಮೊತ್ತ ೪ ವಿಕೆಟ್‌ಗೆ 99 ರನ್.

ವಿಕೆಟ್ ಕೀಪರ್ ದಾಂಡಿಗ ಸ್ಯಾಮ್ ಬಿಲ್ಲಿಂಗ್ಸ್ ಸೊನ್ನೆ ಸುತ್ತಿದರು. ಖಲೀಲ್ ಅಹ್ಮದ್ ಎಸೆತದಲ್ಲಿ ಅವರು ವಿಜಯಶಂಕರ್‌ಗೆ ಕ್ಯಾಚ್ ನೀಡಿದರು. ರವಿಂದ್ರ ಜಡೇಜ (10, 20 ಎಸೆತ ) ಹೆಚ್ಚು ಎಸೆತ ಎದುರಿಸಿ ಕಡಿಮೆ ರನ್ ಗಳಿಸಿದರು. ಹೈದರಾಬಾದ್ ಪರ ರಶೀದ್ ಖಾನ್ (17ಕ್ಕೆ 2) ಹಾಗೂ ಖಲೀಲ್ ಅಹ್ಮದ್ (22ಕ್ಕೆ 2) ಮಿಂಚಿದರು. ಭುವನೇಶ್ವರ ಕುಮಾರ್ 4 ಓವರ್‌ಗಳಲ್ಲಿ 21 ರನ್ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News