ಪೊಲೀಸ್ ಬಂಧನಕ್ಕೆ ಮುನ್ನವೇ ಆತ್ಮಹತ್ಯೆ ಮಾಡಿಕೊಂಡ ಪೆರು ಮಾಜಿ ಅಧ್ಯಕ್ಷ

Update: 2019-04-18 05:53 GMT

ಲಿಮಾ (ಪೆರು): ಎರಡು ಅವಧಿಗೆ ಪೆರು ದೇಶದ ಅಧ್ಯಕ್ಷರಾಗಿದ್ದ ಅಲನ್ ಗಾರ್ಸಿಯಾ ಅವರ ಅಧಿಕಾರಾವಧಿಯಲ್ಲಿ ನಡೆದ ವ್ಯಾಪಕ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಅವರನ್ನು ಬಂಧಿಸಲು ಆಗಮಿಸಿದ ತಕ್ಷಣ, ಗಾರ್ಸಿಯಾ ಸ್ವತಃ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬ್ರೆಝಿಲ್‌ನ ಖ್ಯಾತ ನಿರ್ಮಾಣ ಸಂಸ್ಥೆ ಒಡೆಬ್ರೆಕ್ಟ್‌ಗೆ ಲೋಕೋಪಯೋಗಿ ಇಲಾಖೆ ಕಾಮಗಾರಿಗಳನ್ನು ನೀಡಲು ದೊಡ್ಡ ಮೊತ್ತದ ಲಂಚ ಪಡೆದಿದ್ದಾರೆ ಎಂದು ಆಪಾದಿಸಲಾಗಿತ್ತು. ಆದರೆ ಕಂಪನಿಯಿಂದ ಲಂಚ ಪಡೆದದ್ದನ್ನು ಅವರು ಬಲವಾಗಿ ನಿರಾಕರಿಸಿದ್ದರು.

ಪೆರು ರಾಜಕೀಯ ಕ್ಷೇತ್ರದ ದಿಗ್ಗಜ ಎನಿಸಿಕೊಂಡಿದ್ದ ಗಾರ್ಸಿಯಾ, 1980ರ ದಶಕದಲ್ಲಿ ದೇಶದ ಅಧ್ಯಕ್ಷರಾಗಿದ್ದರು. ಅತಿಯಾದ ಹಣದುಬ್ಬರ, ಮಾವೋವಾದಿ ಉಗ್ರಗಾಮಿಗಳ ಕೃತ್ಯ ಹಾಗೂ ವ್ಯಾಪಕ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಅವರು, ಎರಡು ದಶಕ ಬಳಿಕ ಮತ್ತೆ ಅಧಿಕಾರಕ್ಕೆ ಬಂದರು.

2006ರಿಂದ 2011ರ ವರೆಗೆ ಅಧ್ಯಕ್ಷರಾಗಿದ್ದ ಎರಡನೇ ಅವಧಿಯಲ್ಲಿ ಲಂಚ ಸ್ವೀಕರಿಸಿದ ಆರೋಪದಲ್ಲಿ ಬುಧವಾರ ಅವರನ್ನು ಬಂಧಿಸಲು ಪೊಲೀಸರ ತಂಡ ಆಗಮಿಸಿತ್ತು. ಮುಂಜಾನೆ ಲಿಮಾದಲ್ಲಿರುವ ನಿವಾಸಕ್ಕೆ ಪೊಲೀಸರು ಆಗಮಿಸಿದಾಗ ವಕೀಲರನ್ನು ಕರೆಸಲು ಕರೆ ಮಾಡಿದ ಅವರು ಬೆಡ್‌ರೂಂಗೆ ಹೋದರು.

"ಕೆಲ ನಿಮಿಷಗಳ ಬಳಿಕ ಗುಂಡು ಹಾರಿಸಿದ ಶಬ್ದ ಕೇಳಿಸಿತು. ಪೊಲೀಸರು ಕೊಠಡಿಯೊಳಗೆ ನುಗ್ಗಿದಾಗ ಕುರ್ಚಿಯಲ್ಲಿ ಕುಳಿತೇ ಗಾರ್ಸಿಯಾ ಹಣೆಗೆ ಗುಂಡು ಹೊಡೆದುಕೊಂಡಿರುವುದು ಕಂಡುಬಂತು" ಎಂದು ಆಂತರಿಕ ವ್ಯವಹಾರಗಳ ಸಚಿವ ಕಾರ್ಲೋಸ್ ಮೊರನ್ ಹೇಳಿದ್ದಾರೆ.

ಹಲವು ದಶಕಗಳ ಕಾಲ ಸಾರ್ವಜನಿಕ ಸೇವೆಯಲ್ಲಿದ್ದ ಮಾಜಿ ಅಧ್ಯಕ್ಷರು ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಇಡೀ ದೇಶವನ್ನು ತಲ್ಲಣಗೊಳಿಸಿದೆ. ಈ ಹಠಾತ್ ಸಾವು ನಿಜಕ್ಕೂ ಕಳವಳಕಾರಿ ಎಂದು ಪೆರು ಅಧ್ಯಕ್ಷ ಮಾರ್ಟಿನ್ ವಿಸ್ಕರಾ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News