ಡೆಲ್ಲಿ ವಿರುದ್ಧ ಮುಂಬೈಗೆ ಭರ್ಜರಿ ಜಯ

Update: 2019-04-18 19:08 GMT

ಹೊಸದಿಲ್ಲಿ, ಎ.18: ರಾಹುಲ್ ಚಹಾರ್ ಮೂರು ವಿಕೆಟ್‌ಗಳ ಗೊಂಚಲು ಹಾಗೂ ಪಾಂಡ್ಯ ಸಹೋದರರ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಗುರುವಾರ ಇಲ್ಲಿಯ ಫಿರೋಝ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್‌ನ್ನು 40 ರನ್‌ಗಳಿಂದ ಬಗ್ಗುಬಡಿದಿದೆ.

 169 ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ ಡೆಲ್ಲಿ 20 ಓವರ್‌ಗಳ ಅಂತ್ಯಕ್ಕೆ 9 ವಿಕೆಟ್ ಕಳೆದುಕೊಂಡು 128 ರನ್ ಗಳಿಸಲಷ್ಟೇ ಶಕ್ತವಾಯಿತು. ತಂಡದ ಪರ ಪೃಥ್ವಿ ಶಾ (20, 24 ಎಸೆತ, 2 ಬೌಂಡರಿ) ಹಾಗೂ ಶಿಖರ್ ಧವನ್ (35, 22 ಎಸೆತ, 5 ಬೌಂಡರಿ, 1 ಸಿಕ್ಸರ್) ಮೊದಲ ವಿಕೆಟ್ ಜೊತೆಯಾಟದಲ್ಲಿ 49 ರನ್ ಸೇರಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಇವರಿಬ್ಬರ ವಿಕೆಟ್ ಪಡೆದ ಚಹಾರ್ ಡೆಲ್ಲಿ ಪತನಕ್ಕೆ ನಾಂದಿ ಹಾಡಿದರು. ಕಾಲಿನ್ ಮುನ್ರೊ (3), ನಾಯಕ ಶ್ರೇಯಸ್ ಅಯ್ಯರ್ (3), ರಿಷಭ್ ಪಂತ್ (7) ಸಂಪೂರ್ಣ ವಿಫಲರಾದರು. ಆ ಬಳಿಕ ಅಕ್ಷರ್ ಪಟೇಲ್ (26, 23 ಎಸೆತ, 1 ಬೌಂಡರಿ, 1 ಸಿಕ್ಸರ್) ಹಾಗೂ ಕ್ರಿಸ್ ಮೊರಿಸ್ (11) ಕೆಲಹೊತ್ತು ಪ್ರತಿರೋಧ ತೋರಿದರು.

ಮುಂಬೈ ಪರ ಚಹಾರ್ (19ಕ್ಕೆ 3) ಹಾಗೂ ಬುಮ್ರಾ(18ಕ್ಕೆ 2) ಉತ್ತಮ ಬೌಲಿಂಗ್ ಮಾಡಿದರು.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ನಿಗದಿತ 20 ಓವರ್‌ಗಳಲ್ಲಿ 5 ನಷ್ಟಕ್ಕೆ 168 ರನ್ ಗಳಿಸಿತು. ತಂಡದ ಪರ ನಾಯಕ ರೋಹಿತ್ ಶರ್ಮಾ (30, 22 ಎಸೆತ, 3 ಬೌಂಡರಿ, 1 ಸಿಕ್ಸರ್) ಹಾಗೂ ಕ್ವಿಂಟನ್ ಡಿಕಾಕ್ (35, 27 ಎಸೆತ, 2 ಬೌಂಡರಿ, 2 ಸಿಕ್ಸರ್ ) ಮೊದಲ ವಿಕೆಟ್ ಜೊತೆಯಾಟದಲ್ಲಿ 6.1 ಓವರ್‌ಗಳಲ್ಲಿ 57 ರನ್ ಸೇರಿಸಿದರು. ರೋಹಿತ್ ಅವರು ಅಮಿತ್ ಮಿಶ್ರಾ ಹೆಣೆದ ಎಲ್‌ಬಿಡಬ್ಲು ಬಲೆಗೆ ಬಿದ್ದರು. ಆ ಬಳಿಕ ಬಂದ ಬೆನ್ ಕಟಿಂಗ್ 2 ರನ್ ಗಳಿಸಿ ಅಕ್ಷರ್ ಎಸೆತದಲ್ಲಿ ಪೆವಿಲಿಯನ್ ಸೇರಿದರು. ಡಿಕಾಕ್ ಹಾಗೂ ಸೂರ್ಯಕುಮಾರ್ ಯಾದವ್ (26, 27 ಎಸೆತ, 2 ಬೌಂಡರಿ) ಇನಿಂಗ್ಸ್ ಕಟ್ಟುವ ಕಾಯಕದಲ್ಲಿ ತೊಡಗಿದರು. ಡಿಕಾಕ್ ರನೌಟ್ ಆಗುವ ಮೂಲಕ ನಿರಾಸೆ ಅನುಭವಿಸಿದರು.

ಸೂರ್ಯಕುಮಾರ್‌ಗೆ ಜೊತೆಯಾದ ಕೃಣಾಲ್ ಪಾಂಡ್ಯ (ಅಜೇಯ 37, 26 ಎಸೆತ, 5 ಬೌಂಡರಿ) ನಾಲ್ಕನೇ ವಿಕೆಟ್‌ಗೆ 30 ರನ್ ಸೇರಿಸಲು ನೆರವಾದರು. ಸೂರ್ಯಕುಮಾರ್‌ರನ್ನು ಔಟ್ ಮಾಡಿದ ರಬಾಡ, ಡೆಲ್ಲಿ ಪಾಳಯದಲ್ಲಿ ಸಂಭ್ರಮಕ್ಕೆ ಕಾರಣವಾದರು. ಹಾರ್ದಿಕ್ ಪಾಂಡ್ಯ (32, 15 ಎಸೆತ, 2 ಬೌಂಡರಿ, 3 ಸಿಕ್ಸರ್ ) ಕೊನೆಯ ಓವರ್‌ಗಳಲ್ಲಿ ಅಬ್ಬರಿಸಿದರು. ಡೆಲ್ಲಿ ಪರ ರಬಾಡ 2 ವಿಕೆಟ್ ಪಡೆದರೆ, ಅಕ್ಷರ್ 17 ರನ್ ನೀಡಿ ಒಂದು ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News