ರಾಜಕೀಯ ವೈರಿಗಳ ಐತಿಹಾಸಿಕ ಜಂಟಿ ರ‍್ಯಾಲಿ

Update: 2019-04-19 09:13 GMT

ಲಕ್ನೋ, ಎ. 19: ಇಪ್ಪತ್ತನಾಲ್ಕು ವರ್ಷಗಳಿಂದ ರಾಜಕೀಯವಾಗಿ ವೈರಿಗಳೆನಿಸಿಕೊಂಡ ಬಹುಜನ ಸಮಾಜ ಪಕ್ಷದ ಅಧ್ಯಕ್ಷೆ ಮಾಯಾವತಿ ಮತ್ತು ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ಯಾದವ್ ಅವರು ಶುಕ್ರವಾರ ವೇದಿಕೆ ಹಂಚಿಕೊಳ್ಳಲಿದ್ದಾರೆ.

ಬಿಎಸ್ಪಿ ನಾಯಕಿ ಮಾಯಾವತಿ ಅವರು ಈ ಐತಿಹಾಸಿಕ ರ‍್ಯಾಲಿಯಲ್ಲಿ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ ಹಾಗೂ ಆರ್‌ಎಲ್‌ಡಿ ನಾಯಕ ಅಜಿತ್ ಸಿಂಗ್ ಜತೆ ಸೇರಿ, ಮೈನ್‌ಪುರಿ ಕ್ಷೇತ್ರದಲ್ಲಿ ಮುಲಾಯಂ ಪರ ಮತ ಯಾಚನೆ ಮಾಡಲಿದ್ದಾರೆ.

1995ರಲ್ಲಿ ಲಕ್ನೋ ಅತಿಥಿಗೃಹದಲ್ಲಿ ನಡೆದ ಕಹಿ ಘಟನೆ ಬಳಿಕ ಮುಲಾಯಂ ಹಾಗೂ ಮಾಯಾವತಿ ವೇದಿಕೆ ಹಂಚಿಕೊಳ್ಳುತ್ತಿರುವುದು ಇದೇ ಮೊದಲು. ರ‍್ಯಾಲಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಮೈತ್ರಿಕೂಟದ ಅಭ್ಯರ್ಥಿ ಮುಲಾಯಂ ಈಗಾಗಲೇ ಎಥ್ವಾ ತಲುಪಿದ್ದಾರೆ. ಸೈಫೈ ವಿಮಾನ ನಿಲ್ದಾಣದಲ್ಲಿ ಗುರುವಾರ ರಾತ್ರಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಲಾಯಂ, "ಇದು ಐತಿಹಾಸಿಕ ದಿನ" ಎಂದು ಬಣ್ಣಿಸಿದ್ದರು.

ರ‍್ಯಾಲಿಯ ಬಗ್ಗೆ ಪ್ರಶ್ನಿಸಿದಾಗ, "ರ‍್ಯಾಲಿ ಸಂಘಟಕರನ್ನು ಕೇಳಿ. ನಾನು ಇದರಲ್ಲಿ ಮಾತನಾಡಬೇಕು. ವಿವಿಧ ಪಕ್ಷಗಳ ಗಣ್ಯರು ಇದರಲ್ಲಿ ಭಾಗವಹಿಸುತ್ತಿದ್ದಾರೆ" ಎಂದು ಉತ್ತರಿಸಿದ್ದರು. ಮೈನ್‌ಪುರಿ ಕ್ರಿಶ್ಚಿಯನ್ ಕಾಲೇಜು ಮೈದಾನದಲ್ಲಿ ಈ ಮೆಗಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದೆ. ಮೂರೂ ಪಕ್ಷಗಳ ಮುಖಂಡರು ಬರೇಲಿಯಲ್ಲಿ ಕೂಡಾ ಇದೇ ದಿನ ಜಂಟಿ ರ‍್ಯಾಲಿ ನಡೆಸುವರು.

1993ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಮುಲಾಯಂ ಅವರು ಬಿಎಸ್ಪಿ ಜತೆ ಅಂದರೆ ಅಂದಿನ ಅಧ್ಯಕ್ಷ ಕಾನ್ಶಿರಾಂ ಜತೆ ಮೈತ್ರಿ ಮಾಡಿಕೊಂಡು, ಬಿಜೆಪಿಯನ್ನು ಅಧಿಕಾರದಿಂದ ಹೊರಗಿಡುವಲ್ಲಿ ಯಶಸ್ವಿಯಾಗಿದ್ದರು. ಮುಲಾಯಂ ಸಿಂಗ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಎರಡು ವರ್ಷ ಬಳಿಕ ಬಿಎಸ್ಪಿ ಬೆಂಬಲ ವಾಪಾಸು ಪಡೆದಿತ್ತು. ಈ ಸಂದರ್ಭದಲ್ಲಿ 1995ರ ಜೂನ್ 2ರಂದು ಹಲವು ಮಂದಿ ಎಸ್ಪಿ ಮುಖಂಡರು ಹಾಗೂ ಕಾರ್ಯಕರ್ತರು ಅತಿಥಿಗೃಹದಲ್ಲಿ ಮಾಯಾವತಿ ಮೇಲೆ ಹಲ್ಲೆ ನಡೆಸಿದ್ದರು. 1995ರ ಜೂನ್ 3ರಂದು ಬಿಜೆಪಿ ಬೆಂಬಲದೊಂದಿಗೆ ಅವರು ಮುಖ್ಯಮಂತ್ರಿ ಗಾದಿ ಏರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News